ಕರ್ನಾಟಕ

karnataka

ETV Bharat / state

ಗ್ಯಾರಂಟಿ ಯೋಜನೆ ನಿಲ್ಲಿಸುವಂತೆ ಕಾಂಗ್ರೆಸ್​ ಶಾಸಕರೇ ಅಭಿಯಾನ ಶುರು ಮಾಡಿದ್ದಾರೆ: ಶೆಟ್ಟರ್ - SHETTAR ON GUARANTEE SCHEME

ಸಂಸದರಾದ ಬಳಿಕ ಬೆಳಗಾವಿಯಲ್ಲಿ ಮೊದಲ ಮಾಧ್ಯಮಗೋಷ್ಟಿ ನಡೆಸಿದ ಜಗದೀಶ್​ ಶೆಟ್ಟರ್, ಕಾಂಗ್ರೆಸ್​ ಗ್ಯಾರಂಟಿ ಯೋಜನೆಗಳ ಬಗ್ಗೆ ಭವಿಷ್ಯ ನುಡಿದರು.

SHETTAR SLAM CONGRESS GOVT
ಸಂಸದ ಜಗದೀಶ ಶೆಟ್ಟರ್ (ETV Bharat)

By ETV Bharat Karnataka Team

Published : Jun 13, 2024, 6:00 PM IST

ಬೆಳಗಾವಿ:ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿರಬಹುದು. ಆದರೆ, ಆಂತರಿಕವಾಗಿ ಅವುಗಳನ್ನು ಕ್ಯಾನ್ಸಲ್ ಮಾಡುವಂತೆ ಕಾಂಗ್ರೆಸ್ ಶಾಸಕರ ಒತ್ತಡವೇ ಹೆಚ್ಚಾಗುತ್ತಿದೆ. ಹಾಗಾಗಿ, ಅವರ ಒತ್ತಡಕ್ಕೆ ಮಣಿದು ಗ್ಯಾರಂಟಿ ಯೋಜನೆಗಳನ್ನು ಸಿಎಂ ಮುಂದುವರಿಸಲು ಸಾಧ್ಯವಿಲ್ಲ ಎಂದು ಬೆಳಗಾವಿ ನೂತನ ಸಂಸದ ಜಗದೀಶ್​ ಶೆಟ್ಟರ್ ಭವಿಷ್ಯ ನುಡಿದರು‌.

ಸಂಸದರಾದ ಬಳಿಕ ಬೆಳಗಾವಿಯಲ್ಲಿ ಮೊದಲ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಗ್ಯಾರಂಟಿ‌ ಅನುಷ್ಠಾನ ಮಾಡಿದ್ದರಿಂದ ಸುಮಾರು 20-22 ಸ್ಥಾನಗಳು ಸಿಗುತ್ತವೆ ಎಂದುಕೊಂಡಿದ್ದರು. ಆದರೆ, ಅವರಿಗೆ ಅದು ಅರ್ಥ ಆಗಲಿಲ್ಲ. ಲೋಕಸಭೆ ಚುನಾವಣೆ ರಾಷ್ಟ್ರೀಯತೆ ಮೇಲೆ ನಡೆಯುತ್ತದೆ. ರಾಷ್ಟ್ರೀಯ ನಾಯಕರು ಯಾರಾಗಬೇಕು? ದೇಶದ ನಾಯಕತ್ವ ಯಾರು ವಹಿಸಬೇಕು ಎಂಬುದನ್ನು ನಿರ್ಧರಿಸುತ್ತದೆ. ಅದನ್ನು ಅರ್ಥ ಮಾಡಿಕೊಳ್ಳದೇ ಗ್ಯಾರಂಟಿ ಮೇಲೆ ಗೆದ್ದು ಬಿಡುತ್ತೇವೆ ಎನ್ನುವ ಭ್ರಮೆಯಲ್ಲಿದ್ದರು. ಸೋಲಿನಿಂದ ನಿರಾಸೆಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸಕ್ಸಸ್ ಆದರೆ ಗ್ಯಾರಂಟಿಗಳು ಓಕೆ, ಇಲ್ಲದಿದ್ದರೆನೋ ಓಕೆ ಎಂದುಕೊಂಡಿದ್ದರು. ಅಲ್ಲದೇ ಗ್ಯಾರಂಟಿ ಯೋಜನೆಗಳಿಂದ ಯಾವುದೇ ಅನುದಾನ ಸಿಗುತ್ತಿಲ್ಲ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ರಾಜ್ಯ ಸರ್ಕಾರದ ಬೊಕ್ಕಸ ಎಲ್ಲಾ ಗ್ಯಾರಂಟಿಗಳಿಗೆ ಹೋಗುತ್ತಿದೆ. ಹಾಗಾಗಿ, ಇವುಗಳನ್ನು ಕ್ಯಾನ್ಸಲ್ ಮಾಡುವಂತೆ ಕಾಂಗ್ರೆಸ್ ಶಾಸಕರೇ ಅಭಿಯಾನ ಶುರು ಮಾಡಿದ್ದಾರೆ ಎಂದು ಆರೋಪಿಸಿದರು.

ಇತ್ತಿಚೆಗೆ ನಡೆದ ಲೋಕಸಭೆ ಚುನಾವಣೆ ಬಿಜೆಪಿಗೆ ಅಭೂತಪೂರ್ವ ಗೆಲುವು ತಂದುಕೊಟ್ಟಿದೆ. ಇದು ಬೆಳಗಾವಿ ಜನತೆಯ ಜಯ. ಹಣ, ಅಧಿಕಾರದ ಬಲವನ್ನು ಮೀರಿ ಜನರು ಗೆಲ್ಲಿಸಿದ್ದಾರೆ. ಪಕ್ಷ, ಮೋದಿ ನಾಯಕತ್ವ ನೋಡಿ ನನಗೆ ಗೆಲುವು ತಂದುಕೊಟ್ಟಿದ್ದಾರೆ‌. ಹಾಗಾಗಿ, ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಹಿಂದೆ ನಾಲ್ಕು ಬಾರಿ ಸುರೇಶ್​ ಅಂಗಡಿಯವರಿಗೆ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಬೆಂಬಲ ಸಿಕ್ಕಂತೆ ನನಗೂ ಸಿಕ್ಕಿದೆ. ಜನರ ಪ್ರೀತಿ, ವಿಶ್ವಾಸ, ಗೌರವ ನಾನು ಮರೆಯಲ್ಲ. ಆ ಋಣ ಎಂದಿಗೂ ಮರೆಯಲು ಆಗೋದಿಲ್ಲ ಎಂದು ಶೆಟ್ಟರ್​ ಹೇಳಿದರು‌.

ಸಚಿವರ ಕ್ಷೇತ್ರದಲ್ಲೇ ಲೀಡ್​: ಎರಡು ಕ್ಷೇತ್ರಗಳಲ್ಲಿ ಹಿನ್ನಡೆ ಬಿಟ್ಟರೆ ಎಲ್ಲಾ ಕಡೆ ಮುನ್ನಡೆ ಆಗಿದೆ‌. ಅಭಯ್ ಪಾಟೀಲ ಅವರ ನೇತೃತ್ವದಲ್ಲಿ ದಕ್ಷಿಣ 73220 ಮತಗಳ ಅಂತರ ಸಿಕ್ಕಿದೆ‌. ಇದರಿಂದ ಹೆಚ್ಚಿನ ಬಲ ಸಿಕ್ಕಿದೆ. ಅಲ್ಲದೇ ಸ್ವತಃ ಸಚಿವರ ಗ್ರಾಮೀಣ ಕ್ಷೇತ್ರದಲ್ಲೇ 50529 ಮತಗಳ ಲೀಡ್ ಸಿಕ್ಕಿದ್ದು, ಗೆಲುವಿಗೆ ಕಾರಣವಾಯಿತು. ಅಲ್ಲದೇ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಪಕ್ಷದ ಎಲ್ಲಾ ಶಾಸಕರು, ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಿದ್ದರಿಂದ ದೊಡ್ಡ ಮಟ್ಟದ ಅಂತರದಲ್ಲಿ ಗೆಲ್ಲಲು ಸಾಧ್ಯವಾಯಿತು ಎಂದರು.

ಬೆಳಗಾವಿ ಲೋಕಸಭೆ ಕ್ಷೇತ್ರ ಮಾದರಿ ಮಾಡುವ ನಿಟ್ಟಿನಲ್ಲಿ ಇಂದಿನಿಂದಲೇ ಕಾರ್ಯೋನ್ಮುಖನಾಗುತ್ತೇನೆ. ನಾಳೆ ಡಿಸಿ ಕಚೇರಿಯಲ್ಲಿ ಕೇಂದ್ರದ ಪ್ರಾಯೋಜಿತ ಯೋಜನೆಗಳ ಮಾಹಿತಿ ಪಡೆಯಲು ಸಭೆ ಮಾಡುತ್ತೇನೆ. ಧಾರವಾಡ-ಕಿತ್ತೂರು-ಬೆಳಗಾವಿ ಹೊಸ ರೈಲು ಮಾರ್ಗ, ಜೆಜೆಎಂ, ಸ್ಮಾರ್ಟ್ ಸಿಟಿ ಬಗ್ಗೆ ಚರ್ಚಿಸುತ್ತೇನೆ. ಅಲ್ಲದೇ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ತ್ರಿವಳಿ ನಗರ ನಿರ್ಮಾಣಕ್ಕೆ ಪೂರಕವಾಗಿ ಕೆಲಸ ಮಾಡಲಿದ್ದೇನೆ. ಹೆಚ್ಚು ಉದ್ಯಮಗಳು ಇಲ್ಲಿಗೆ ಬರಬೇಕಿದೆ. ಎಸ್.ಐ.ಆರ್. ಅನುಷ್ಠಾನಕ್ಕೆ ತಂದು, ಉದ್ಯೋಗವಕಾಶ ಹೆಚ್ಚಿಸುವ, ಐಟಿ ಕಂಪನಿಗಳನ್ನು ಸ್ಥಾಪಿಸುವುದು ಸೇರಿ ಸಮಗ್ರ ಅಭಿವೃದ್ಧಿ ಜಿಲ್ಲೆಯ ಬುದ್ಧಿ ಜೀವಿಗಳ ಜೊತೆಗೆ ಸಮಾಲೋಚನೆ ಮಾಡುತ್ತೇನೆ. ಕರ್ನಾಟಕದಲ್ಲಿ ಅಧಿಕೃತವಾಗಿ ಬೆಳಗಾವ ಎರಡನೇ ರಾಜಧಾನಿ ಮಾಡಿ, ಬೆಳಗಾವಿಯನ್ನು ಕೇಂದ್ರಸ್ಥಾನಕ್ಕೆ ತಂದು ನಿಲ್ಲಿಸುತ್ತೇನೆ ಎಂದು ಜಗದೀಶ ಶೆಟ್ಟರ್ ಭರವಸೆ ನೀಡಿದರು‌.

ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿರುವೆ. ಬೆಳಗಾವಿ ಲೋಕಸಭೆ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಏನು ಕೆಲಸ ಆಗಬೇಕೋ? ಮಂತ್ರಿ ಆಗಿ ಮಾಡುವ ಕೆಲಸಗಳನ್ನು ಲೋಕಸಭಾ ಸದಸ್ಯನಾಗಿ ಮಾಡಲಿದ್ದೇನೆ. ಇನ್ನು ಜಗದೀಶ್​ ಶೆಟ್ಟರ್ ಶಕ್ತಿ ಏನು ಅಂತಾ ಇಡೀ ರಾಜ್ಯಕ್ಕೆ ಬೆಳಗಾವಿ ಜನತೆ ತೋರಿಸಿಕೊಟ್ಟಿದ್ದಾರೆ. ಬದಲಾದ ಶೆಟ್ಟರ್ ಹೇಗಿರಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ನೀವೆ ನೋಡುತ್ತಿರಿ ಎಂದ ಅವರು, ಹುಬ್ಬಳ್ಳಿ ಶೆಟ್ಟರ್ ಬೇರೆ, ಬೆಳಗಾವಿ ಶೆಟ್ಟರ್ ಅವರೇ ಬೇರೆ ಎಂದು ಹೇಳಿದರು.

ಲಕ್ಷ್ಮಣ ಸವದಿ ಬಗ್ಗೆ ಪ್ರತಿಕ್ರಿಯೆ: ನಿಮ್ಮ ಹಳೆ ಸ್ನೇಹಿತ ಲಕ್ಷ್ಮಣ ಸವದಿ ಅವರನ್ನು ಬಿಜೆಪಿಗೆ ಕರೆ ತರುತ್ತಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಸವದಿ ಅವರು ನಮ್ಮ ಸಂಪಕರ್ದಲ್ಲಿ ಇಲ್ಲ. ಕಾಂಗ್ರೆಸ್ ಪಕ್ಷದ ಒಳಜಗಳ ಅವರ ಹಣೆಬರಹ. ನಾವು ಯಾಕೆ ಅದರ ಬಗ್ಗೆ ಚಿಂತೆ ಮಾಡೋದು ಎಂದು ಲೇವಡಿ ಮಾಡಿದ ಶೆಟ್ಟರ್, ಇಷ್ಟು ದೊಡ್ಡ ಅಂತರದಲ್ಲಿ ಗೆದ್ದಿದ್ದೇನೆ. ಹಾಗಾಗಿ, ಸೋಲಿಸಲು ಪ್ರಯತ್ನಿಸಿದವರ ಬಗ್ಗೆ ಮಾತಾಡೋದಿಲ್ಲ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ಮಹದಾಯಿ ಕಳಸಾ ಬಂಡೂರಿ ಯೋಜನೆ ಸಂಬಂಧ ಈಗಾಗಲೇ ರಾಜ್ಯಕ್ಕೆ 13 ಟಿಎಂಸಿ ನೀರು ಸಿಕ್ಕಿದೆ. ಅಲ್ಲದೇ ಕೇಂದ್ರ ಸರ್ಕಾರ ಅನುಮತಿ ಕೂಡ ನೀಡಿದೆ. ಪರಿಸರ ಮತ್ತು ಅರಣ್ಯ ಇಲಾಖೆ, ವನ್ಯಜೀವಿ ಮಂಡಳಿಯಲ್ಲಿ ಬಾಕಿಯಿದೆ. ಹಾಗಾಗಿ, ಸಂಬಂಧಿಸಿದ ಸಚಿವರನ್ನು ನಾನೇ ಖುದ್ದಾಗಿ ಭೇಟಿಯಾಗುತ್ತೇನೆ. ಅಲ್ಲದೇ ವನ್ಯಜೀವಿ ಮಂಡಳಿಯವರ ಜೊತೆಗೂ ಸಮಾಲೋಚಿಸುತ್ತೇನೆ. ಅದೇ ರೀತಿ ಗೋವಾ ಸಿಎಂ ಜೊತೆ ಮಾತುಕತೆಗೂ ಪ್ರಯತ್ನಿಸುತ್ತೇನೆ. ಅದು ಆಗದಿದ್ದರೆ, ಕಾನೂನು ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಯೋಜನೆಗೆ ಕ್ಲಿಯರನ್ಸ್ ಪಡೆಯಲು ಪ್ರಯತ್ನಿಸುತ್ತೇನೆ ಎಂದು ಶೆಟ್ಟರ್​ ಇದೇ ಸಂದರ್ಭದಲ್ಲಿ ಹೇಳಿದರು‌.

ಇದನ್ನೂ ಓದಿ:ಉಸ್ತುವಾರಿ - ತವರು ಜಿಲ್ಲೆ ಮಾತ್ರವಲ್ಲ, ಸ್ವ-ಕ್ಷೇತ್ರಗಳಲ್ಲೇ ಹಿನ್ನಡೆ: ಸಚಿವರುಗಳಿಗೆ ಹೊಣೆಗಾರಿಕೆ! - Setback for Ministers

ABOUT THE AUTHOR

...view details