ಸೋರುತಿಹುದು ಬೆಳಗಾವಿಯ ಡಿಡಿಪಿಐ ಕಚೇರಿ (ETV Bharat) ಬೆಳಗಾವಿ:ಬೆಳಗಾವಿಯಲ್ಲಿ ಮಳೆ ಜೋರಾಗಿದ್ದು, ಡಿಡಿಪಿಐ ಕಚೇರಿ ಸೋರುತ್ತಿದೆ. ಇಲ್ಲಿನ ಸಿಬ್ಬಂದಿ ಛತ್ರಿ ಹಿಡಿದು ಕೆಲಸ ಮಾಡುವ ದುಸ್ಥಿತಿ ಬಂದೊದಗಿದೆ.
ಕಚೇರಿಯಲ್ಲಿ ಛತ್ರಿ ಹಿಡಿದುಕೊಂಡೇ ಕೂರಬೇಕು. ಒಂದು ಕೊಠಡಿಯಿಂದ ಮತ್ತೊಂದು ಕೊಠಡಿಗೆ ಹೋಗಬೇಕಾದರೂ ಛತ್ರಿ ಬೇಕು. ಅಲ್ಲದೇ, ಮಹತ್ವದ ದಾಖಲೆಗಳೂ ಸಹ ನೀರು ಪಾಲಾಗುವ ಆತಂಕವಿದೆ. ಸುಮಾರು 50 ವರ್ಷಗಳಷ್ಟು ಹಳೆಯ ಕಟ್ಟಡ ಇದಾಗಿದ್ದು, ಒಂದೆಡೆ ಗೋಡೆಗಳಲ್ಲಿ ನೀರು ಸೋರುತ್ತಿದ್ದರೆ, ಮತ್ತೊಂದೆಡೆ ಒಡೆದ ಹಂಚುಗಳಿಂದಲೂ ನೀರು ಬೀಳುತ್ತಿದೆ. ಹಾಗಾಗಿ, ಅಲ್ಲಲ್ಲಿ ಬಕೆಟ್‌ಗಳನ್ನಿಟ್ಟು ನೀರು ಸಂಗ್ರಹಿಸಲಾಗುತ್ತಿದೆ.
ಈ ಸಮಸ್ಯೆಯನ್ನು ಬಾಯಿ ಬಿಟ್ಟು ಹೇಳಿದರೆ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಸೋರುವ ಕಚೇರಿಯಲ್ಲಿಯೇ ಸಿಬ್ಬಂದಿ ಕಾಯಕ ಮುಂದುವರೆಸಿದ್ದಾರೆ.
ಬೆಳಗಾವಿಯ ಡಿಡಿಪಿಐ ಕಚೇರಿ (ETV Bharat) ಪ್ರಭಾರ ಡಿಡಿಪಿಐ ಮೋಹನಕುಮಾರ ಹಂಚಾಟೆ ಈ ಕುರಿತು ಪ್ರತಿಕ್ರಿಯಿಸಿ, "ಇದು ಬಹಳ ಹಳೆಯ ಕಟ್ಟಡ. ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಈ ರೀತಿ ಆಗಿದೆ. ಎರಡ್ಮೂರು ದಿನಗಳಲ್ಲಿ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಮತ್ತು ತಗಡುಗಳನ್ನು ಹಾಕಿ, ಮಳೆ ನೀರು ಸೋರದಂತೆ ನೆರಳಿನ ವ್ಯವಸ್ಥೆ ಮಾಡುತ್ತೇವೆ. ಇದು ಲೋಕೋಪಯೋಗಿ ಇಲಾಖೆಯ ಕಟ್ಟಡ ಆಗಿದ್ದರಿಂದ ನವೀಕರಣ ಮಾಡಲು ಇಂಜಿನಿಯರ್‌ರನ್ನು ಸಂಪರ್ಕಿಸಿದ್ದು, ಅವರು ಎಸ್ಟಿಮೇಟ್ ಮಾಡಿಕೊಡುತ್ತೇನೆ ಎಂದಿದ್ದಾರೆ. ಅದನ್ನು ಸರ್ಕಾರಕ್ಕೆ ಕಳಿಸುತ್ತೇವೆ. ಆದಷ್ಟು ಬೇಗ ಸರ್ಕಾರದಿಂದ ಮಂಜೂರಾತಿ ಪಡೆದು ಕಟ್ಟಡ ನವೀಕರಣ ಮಾಡಲಾಗುವುದು" ಎಂದು ಹೇಳಿದರು.
ಇದನ್ನೂ ಓದಿ:ರಾಜ್ಯದ ಜಲಾಶಯಗಳು ಬಹುತೇಕ ಭರ್ತಿ: ಇಂದಿನ ನೀರಿನ ಮಟ್ಟ ಹೀಗಿದೆ - Water Levels Of Major Reservoirs