ಕರ್ನಾಟಕ

karnataka

By ETV Bharat Karnataka Team

Published : Mar 26, 2024, 12:33 PM IST

Updated : Mar 26, 2024, 1:53 PM IST

ETV Bharat / state

ಮಿಸ್ಟರ್ ಏಷ್ಯಾ ಚಿನ್ನದ ಪದಕ ಗೆದ್ದ ಬೆಳಗಾವಿ ಬಾಡಿ ಬಿಲ್ಡರ್ - MR ASIA FROM BELAGAVI

ಮಿಸ್ಟರ್ ಏಷಿಯಾ ಬಾಡಿ ಬಿಲ್ಡಿಂಗ್ ಆಂಡ್ ಫಿಟ್​ನೆಸ್ ಸ್ಪರ್ಧೆಯಲ್ಲಿ ಬೆಳಗಾವಿಯ ಬಿಲ್ಡರ್ ಚಿನ್ನದ ಪದಕ ಗೆದ್ದಿದ್ದಾರೆ.

ಮಿಸ್ಟರ್ ಏಷಿಯಾ ಚಿನ್ನದ ಪದಕ ಗೆದ್ದ ಬೆಳಗಾವಿ ಬಾಡಿ ಬಿಲ್ಡರ್
ಮಿಸ್ಟರ್ ಏಷಿಯಾ ಚಿನ್ನದ ಪದಕ ಗೆದ್ದ ಬೆಳಗಾವಿ ಬಾಡಿ ಬಿಲ್ಡರ್

ಮಿಸ್ಟರ್ ಏಷ್ಯಾ ಚಿನ್ನದ ಪದಕ ಗೆದ್ದ ಬೆಳಗಾವಿ ಬಾಡಿ ಬಿಲ್ಡರ್

ಬೆಳಗಾವಿ: "ಮಿಸ್ಟರ್ ಏಷ್ಯಾ ಬಾಡಿ ಬಿಲ್ಡಿಂಗ್ ಆಂಡ್ ಫಿಟ್​ನೆಸ್ ಸ್ಪರ್ಧೆ"ಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಬೆಳಗಾವಿಯ ಬಾಡಿ ಬಿಲ್ಡರ್​ ಒಬ್ಬರು ಕುಂದಾನಗರಿಯ ಕೀರ್ತಿ ಹೆಚ್ಚಿಸಿದ್ದಾರೆ.

ಹಿಂಡಲಗಾ ಗ್ರಾಮದ ನಾಗೇಂದ್ರ ಮಡಿವಾಳ, ಫೆ.24ರಂದು ದೆಹಲಿಯಲ್ಲಿ ಯುನೈಟೆಡ್ ಇಂಟರನ್ಯಾಶನಲ್ ಬಾಡಿ ಬಿಲ್ಡಿಂಗ್ ಫಿಟ್​ನೆಸ್ ಫೆಡರೇಷನ್ ವತಿಯಿಂದ ಆಯೋಜಿಸಿದ್ದ "ಮಿಸ್ಟರ್ ಏಷ್ಯಾ ಬಾಡಿ ಬಿಲ್ಡಿಂಗ್ ಆಂಡ್ ಫಿಟ್​ನೆಸ್ ಸ್ಪರ್ಧೆ"ಯ 75 ಕೆಜಿ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ವಿವಿಧ ರಾಜ್ಯ, ದೇಶಗಳ 45ಕ್ಕೂ ಹೆಚ್ಚು ಬಾಡಿ ಬಿಲ್ಡರ್​ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ತಮ್ಮ ಅತ್ಯುತ್ತಮ ದೇಹದಾರ್ಢ್ಯತೆ ಪ್ರದರ್ಶಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

15 ವರ್ಷಗಳ ಕಠಿಣ ಪರಿಶ್ರಮಕ್ಕೆ ಸಿಕ್ಕ ಫಲ; 2023ರ ಡಿಸೆಂಬರ್​ನಲ್ಲಿ ಬೆಂಗಳೂರು ಪ್ರೋ ಶೋದಲ್ಲಿ ಮಿಸ್ಟರ್ ಕರ್ನಾಟಕ ಪ್ರಶಸ್ತಿ ಗೆದ್ದಿದ್ದ ನಾಗೇಂದ್ರ ಮಿಸ್ಟರ್ ಏಷ್ಯಾ ಬಾಡಿ ಬಿಲ್ಡಿಂಗ್ ಆಂಡ್ ಫಿಟ್​ನೆಸ್ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಈ ಹಿಂದೆ 2019, 2023ರಲ್ಲಿ ಎರಡು ಬಾರಿ ಮಿಸ್ಟರ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 15 ವರ್ಷಗಳ‌ ಕಠಿಣ ಪರಿಶ್ರಮದ ಫಲವಾಗಿ ಇಂದು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.‌ ಈವರೆಗೆ ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸುಮಾರು 100ಕ್ಕೂ ಹೆಚ್ಚು ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗಿಯಾಗಿ ಪದಕಗಳನ್ನು ಗೆದ್ದಿರುವ ಹೆಗ್ಗಳಿಕೆ ನಾಗೇಂದ್ರ ಅವರದ್ದು.

ಮೂಲತಃ ಬಸವನ ಕುಡಚಿ ಗ್ರಾಮದವರಾದ ನಾಗೇಂದ್ರ ಸದ್ಯ ಹಿಂಡಲಗಾ ಗ್ರಾಮದಲ್ಲಿ ವಾಸವಾಗಿದ್ದು, ಸ್ವಂತ ಜಿಮ್ ನಡೆಸುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಸೇರಿ ಐದು ಗಂಟೆ ತಮ್ಮದೇ ಜಿಮ್ ನಲ್ಲಿ ಬೆವರು ಸುರಿಸುವ ನಾಗೇಂದ್ರ ಉಪ್ಪು, ಕಾರ, ಸಿಹಿ ತಿನಿಸುಗಳನ್ನು ತಿನ್ನೋದಿಲ್ಲ. ಪ್ರತಿನಿತ್ಯ ಅರ್ಧ ಕಿಲೋ ಚಿಕನ್, 30 ಮೊಟ್ಟೆ, ವಿವಿಧ ತರಕಾರಿ, ಬ್ರೌನ್ ರೈಸ್ ಸೇರಿ ಡಯಟ್​ಗೆ ಸಂಬಂಧಿಸಿದ ತಿನಿಸುಗಳನ್ನಷ್ಟೇ ಸೇವಿಸುತ್ತಾರೆ. ಅಲ್ಲದೇ ಈವರೆಗೆ ನಾಗೇಂದ್ರ ಗರಡಿಯಲ್ಲಿ ಸಾವಿರಾರು ಬಾಡಿ ಬಿಲ್ಡರ್ ಗಳು ತರಬೇತಿ ಪಡೆದು ಸಾಧನೆ ಮಾಡುತ್ತಿದ್ದಾರೆ.

ಈಟಿವಿ ಭಾರತ ಜೊತೆಗೆ ಮಾತನಾಡಿದ ನಾಗೇಂದ್ರ‌ ಮಡಿವಾಳ, ಜಿಲ್ಲೆ, ರಾಜ್ಯ ಮತ್ತು ಇಡೀ ದೇಶಕ್ಕೆ ನಾನು ಚಿನ್ನದ ಪದಕ ತಂದಿರುವುದಕ್ಕೆ ತುಂಬಾ ಹೆಮ್ಮೆ ಮತ್ತು ಖುಷಿಯಾಗುತ್ತಿದೆ. ಕಳೆದ 15 ವರ್ಷಗಳಿಂದ ವರ್ಕೌಟ್ ನನ್ನ ಕರ್ತವ್ಯ ಎಂದು ತಿಳಿದು ಮಾಡಿದ್ದೇನೆ. ಡಯಟ್ ನಿಯಮ ಪಾಲಿಸಿದ್ದೇನೆ. ಹೀಗೆ ಹಂತ ಹಂತವಾಗಿ ಮೇಲೆ ಬಂದಿದ್ದೇನೆ ಎಂದರು.

ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ತಪ್ಪು ಕಲ್ಪನೆಯಿಂದ ಬಹಳಷ್ಟು ಪಾಲಕರು ತಮ್ಮ ಮಕ್ಕಳನ್ನು ಜಿಮ್​ಗೆ ಕಳಿಸೋದಿಲ್ಲ. ಆದರೆ, ಆ ರೀತಿ ಏನೂ ಆಗೋದಿಲ್ಲ. ವರ್ಕೌಟ್ ಮಾಡೋದರಿಂದ ನೀವು ಆರೋಗ್ಯವಾಗಿರುತ್ತಿರಿ. ಎಲ್ಲಾ ವರ್ಕೌಟ್ ಒಮ್ಮೆಲೆ ಹೇಳುವುದಿಲ್ಲ‌. ಹಂತ ಹಂತವಾಗಿ ಕಲಿಸುತ್ತೇವೆ. ಒಳ್ಳೆಯ ಆಹಾರ ಸೇವಿಸಬೇಕು. ಡಯಟ್ ನಿಯಮ ಪಾಲಿಸಿದರೆ, ಯಾವುದೇ ರೀತಿ ಆರೋಗ್ಯದಲ್ಲಿ ಸಮಸ್ಯೆ ಆಗೋದಿಲ್ಲ‌ ಎಂದು ಸಲಹೆ ನೀಡಿದರು.

ಮುಂದೆ ವರ್ಲ್ಡ್ ಒಲಿಂಪಿಯಾಗೆ ಹೋಗುವ ಇಚ್ಛೆ ಹೊಂದಿದ್ದೇನೆ. ನೂರಕ್ಕೆ ನೂರು ಕಠಿಣ ಪರಿಶ್ರಮ ಹಾಕುತ್ತೇನೆ. ನನ್ನ ಪತ್ನಿ, ತಂದೆ-ತಾಯಿ, ಸಹೋದರ, ಸ್ನೇಹಿತರ ಪ್ರೋತ್ಸಾಹದಿಂದ ಇಲ್ಲಿಯವರೆಗೆ ಬಂದು ನಿಂತಿದ್ದೇನೆ. ನನ್ನ ಡಯಟ್ ಆಹಾರ ತಯಾರಿಸಲು ಪತ್ನಿ ಪ್ರತಿದಿನ ಐದಾರು ಗಂಟೆ ಸಮಯ ಮೀಸಲಿಡುತ್ತಾರೆ. ನನ್ನ ಮಗಳು ಕೂಡ ನನಗೆ ಸದಾಕಾಲ ಪ್ರೇರೇಪಿಸುತ್ತಾಳೆ. ಜನರ ಆಶೀರ್ವಾದದಿಂದ ಮತ್ತಷ್ಟು ಸಾಧನೆ ಮಾಡುತ್ತೇನೆ ಎಂದು ಹೇಳಿದರು.

ಪತ್ನಿ ಅನುರಾಧಾ ಮಾತನಾಡಿ, ನನ್ನ ಪತಿ ಸಾಧನೆ ಕಂಡು ನನಗೆ ಬಹಳ ಖುಷಿ ಮತ್ತು ಹೆಮ್ಮೆ ಆಗುತ್ತಿದೆ. ಕಠಿಣ ಪರಿಶ್ರಮ, ದೃಢ ಮನಸ್ಸು, ಏಕಾಗ್ರತೆ, ಕಡ್ಡಾಯ ಡಯಟ್ ನಿಂದಾಗಿ ಚಿನ್ನದ ಪದಕ ಗೆಲ್ಲಲು ಸಾಧ್ಯವಾಗಿದೆ. ಇದು ಅವರ ಕಠಿಣ ಪರಿಶ್ರಮಕ್ಕೆ ಸಂದ ಗೆಲುವು ಎಂದು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ:ದಾವಣಗೆರೆ: ಸೌತ್​​ ಇಂಡಿಯಾ ಬಾಡಿ ಬಿಲ್ಡಿಂಗ್​ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ

Last Updated : Mar 26, 2024, 1:53 PM IST

ABOUT THE AUTHOR

...view details