ಬೆಂಗಳೂರು: "ಪಕ್ಷಕ್ಕೆ ಬದ್ಧರಾಗಿರುತ್ತೇವೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಕಷ್ಟ. ಕಾನೂನಿನಲ್ಲಿ ಬ್ಯಾನ್ ಮಾಡಿದರೆ ಮಾತ್ರ ಪಕ್ಷಾಂತರ ನಿಲ್ಲುತ್ತದೆ" ಎಂದು ಸಚಿವ ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಸದಾಶಿವನಗರದ ಬಳಿ ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, "ರಾಜಕಾರಣದಲ್ಲಿ ನೋ ಪರ್ಮನೆಂಟ್ ಎನಿಮಿ. ನೋ ಪರ್ಮನೆಂಟ್ ಫ್ರೆಂಡ್. ಇತ್ತೀಚೆಗೆ ಹರಿಯಾಣ, ಮಹಾರಾಷ್ಟ್ರದಲ್ಲೂ ಇಂತಹ ಬೆಳವಣಿಗೆ ನೋಡಿದ್ದೇವೆ. ಪಕ್ಷ ನಿಷ್ಠರು ಕೆಲವರಿದ್ದಾರೆ. ಕಾನೂನಿನಲ್ಲಿ ಪಕ್ಷಾಂತರಕ್ಕೆ ಅವಕಾಶವಿದೆ" ಎಂದರು.
ಯೋಗೇಶ್ವರ್ ಜನಪರ ಕೆಲಸ ಮಾಡಿದ್ದಾರೆ; ಪರಮೇಶ್ವರ್:"ಯೋಗೇಶ್ವರ್ ಅವರನ್ನು ಕಾಂಗ್ರೆಸ್ಸಿಗೆ ಸ್ವಾಗತ ಮಾಡುತ್ತೇನೆ. ಹೈಕಮಾಂಡ್ ಅವರನ್ನು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಇದು ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ದೊಡ್ಡ ಶಕ್ತಿಯನ್ನು ಕೊಡುತ್ತದೆ. ಯೋಗೇಶ್ವರ್ ಕ್ಷೇತ್ರದಲ್ಲಿ ಬಹಳ ಉತ್ತಮ ಕೆಲಸ ಮಾಡಿದ್ದಾರೆ. ಜನಪರವಾಗಿ ಅವರಿಗೆ ಒಳ್ಳೆಯ ಅಭಿಪ್ರಾಯವಿದೆ. ನಮ್ಮ ಪಕ್ಷಕ್ಕೆ ಅವರು ಬಂದಿರುವುದು ಒಳ್ಳೆಯದು. ಆ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯೋಗೇಶ್ವರ್ ಕಾಂಗ್ರೆಸ್ಸಿಗೆ ಅನಿವಾರ್ಯನಾ ಎಂಬ ವಿಚಾರವಾಗಿ ಮಾತನಾಡಿದ ಗೃಹಸಚಿವರು, "ಆ ರೀತಿ ಪ್ರಶ್ನೆ ಬರಲ್ಲ, ನಾವು ಕ್ಷೇತ್ರವನ್ನು ಗೆಲ್ಲಬೇಕು. ರಣನೀತಿ ಮಾಡಬೇಕು. ಯಾವ ರೀತಿ ರಣನೀತಿ ಮಾಡಬೇಕೋ, ಅದನ್ನು ನಮ್ಮ ಅಧ್ಯಕ್ಷರು ಮಾಡಿದ್ದಾರೆ. ಡಿಕೆಶಿ ಸಹೋದರ ಸುರೇಶ್ ಅವರ ಲೋಕಸಭಾ ವ್ಯಾಪ್ತಿಗೆ ಚನ್ನಪಟ್ಟಣ ಬರುತ್ತೆ. ಪಕ್ಷದ ಹಿತದೃಷ್ಟಿಯಿಂದ ಕರೆದುಕೊಂಡಿದ್ದಾರೆ. ಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತನು ಡಿಕೆಶಿ ಅವರಿಗೆ ಪರಿಚಯ ಇರೋದ್ರಿಂದ ಸೂಕ್ಷ್ಮವಾಗಿ ಪರಿಶೀಲನೆ ಮಾಡಿದ್ದಾರೆ. ಅನಿವಾರ್ಯತೆ ಅನ್ನುವುದಕ್ಕಿಂತ ಇವತ್ತಿನ ಪರಿಸ್ಥಿತಿಗೆ ಅವಶ್ಯಕ" ಎಂದು ತಿಳಿಸಿದರು.