ಬೆಂಗಳೂರು: ನಿವೇಶನಗಳ ಹರಾಜಿನ ಸಮಯದಲ್ಲಿ ಯಾವುದೇ ಕಾರಣ ನೀಡದೇ ಬಿಡ್ ಸ್ವೀಕರಿಸುವ ಅಥವಾ ತಿರಸ್ಕರಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ. ಬಿಡಿಎ ನಿರ್ಧಾರವು ಕಾನೂನುಬದ್ಧವಾಗಿದ್ದು, ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿದೆ ಮತ್ತು ಸಾರ್ವಜನಿಕರಿಗೆ ಪ್ರಯೋಜನಕಾರಿಯಾಗಿದೆ ಎಂದು ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಜಿ. ಬಸವರಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.
ಸಚಿನ್ ನಾಗರಾಜಪ್ಪ ಎಂಬುವವರು ಸಲ್ಲಿಸಿದ್ದ ಬಿಡ್ ಅನ್ನು ಬಿಡಿಎ ತಿರಸ್ಕರಿಸಿತ್ತು ಮತ್ತು ಬಿಡಿಎದ ಈ ನಿರ್ಧಾರವನ್ನು ಏಕಸದಸ್ಯ ಪೀಠವು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಬಿಡಿಎ ವಿಭಾಗೀಯ ಪೀಠದ ಮೊರೆ ಹೋಗಿತ್ತು. ನಾಗರಾಜಪ್ಪ ಅವರು ಸಲ್ಲಿಸಿದ್ದ ಪ್ರತಿ ಚದರ ಮೀಟರ್ ಗೆ 1,54,000 ರೂ.ಗಳ ಬಿಡ್ ಅನ್ನು ಪುರಸ್ಕರಿಸುವಂತೆ ಏಕಸದಸ್ಯ ಪೀಠವು ಬಿಡಿಎಗೆ ನಿರ್ದೇಶನ ನೀಡಿತ್ತು.
ಬಿಡ್ ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಬಿಡಿಎಗೆ ಇದೆ;ತನ್ನ ಕ್ರಮಗಳು ಬಿಡಿಎ (ಕಾರ್ನರ್ ಸೈಟ್ಗಳು ಮತ್ತು ವಾಣಿಜ್ಯ ಸೈಟ್ಗಳ ವಿಲೇವಾರಿ) ನಿಯಮಗಳು, 1984 ಕ್ಕೆ ಅನುಗುಣವಾಗಿವೆ ಎಂದು ಬಿಡಿಎ ವಾದಿಸಿತು. ಈ ನಿಯಮಗಳ ಪ್ರಕಾರ ಯಾವುದೇ ಕಾರಣ ನೀಡದೇ ಬಿಡ್ಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಇದೆ. ಆಸ್ತಿಯನ್ನು ಸಾಧ್ಯವಾದಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಸಾರ್ವಜನಿಕ ಆಸ್ತಿ ಹರಾಜು ಪ್ರಕ್ರಿಯೆಯ ಉದ್ದೇಶವಾಗಿದೆ ಮತ್ತು ಬಿಡ್ ಮಾಡಲಾದ ಬೆಲೆಯು ಅಸಮರ್ಪಕವೆಂದು ಕಂಡುಬಂದರೆ ಬಿಡ್ಗಳನ್ನು ರದ್ದುಗೊಳಿಸುವ ಹಕ್ಕು ತನಗಿದೆ ಎಂದು ಎಂದು ಬಿಡಿಎ ಒತ್ತಿಹೇಳಿದೆ.