ಬಿಡಿಎ ಫ್ಲಾಟ್ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬೆಂಗಳೂರು:ಬಿಡಿಎ ಕೋನದಾಸಪುರದಲ್ಲಿ ಆಯೋಜಿಸಿದ್ದ ಫ್ಲಾಟ್ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಿಲಿಕಾನ್ ಸಿಟಿಯಲ್ಲಿ ಚಿಕ್ಕದಾದರೂ ಪರವಾಗಿಲ್ಲ ಒಂದು ಸೂರು ಹೊಂದಬೇಕೆಂದುಕೊಂಡವರ ಕನಸನ್ನು ಬಿಡಿಎ ನನಸು ಮಾಡಿದೆ. ರಾಜ್ಯ ಸೇರಿ ಹೊರ ರಾಜ್ಯಗಳ ಜನರೂ ಪ್ಲಾಟ್ ಪಡೆದು ಸಂತಸಗೊಂಡಿದ್ದಾರೆ.
ಫ್ಲಾಟ್ ಮೇಳದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳ ಮೂಲದ ಬೆಂಗಳೂರಿನ ನಿವಾಸಿಯಾದ ಸುದೀಪ್ ದಂಪತಿಗಳು ಕೋನದಾಸಪುರದ ಬಾಡಿಗೆ ಮನೆಯಲ್ಲಿ ವಾಸವಿದ್ದು, ಬೆಂಗಳೂರಿನಲ್ಲಿ ಮನೆ ಖರೀದಿಸುವ ಆಸೆಯನ್ನು ಹೊಂದಿದ್ದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈ ಆಸೆಯನ್ನು ಈಡೇರಿಸಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ ಮೂಲದ ಬೆಂಗಳೂರಿನ ನಿವಾಸಿಯಾದ ಮಲ್ಲು ದಂಪತಿ ಬೆಂಗಳೂರಿನಲ್ಲಿ ಒಂದು ಫ್ಲಾಟ್ ಅನ್ನು ಖರೀದಿಸುವ ಕನಸಿತ್ತು. ನಮ್ಮ ಆಶಯವನ್ನು ಬಿಡಿಎ ಪೂರ್ಣಗೊಳಿಸಿದೆ. ಅಲ್ಲದೇ ಕೊಮ್ಮಘಟ್ಟ ಫ್ಲಾಟ್ನ ಹಂಚಿಕೆ ಪತ್ರವನ್ನು ಸ್ಥಳದಲ್ಲಿಯೇ ಪಡೆದು ಸಂತಸ ವ್ಯಕ್ತಪಡಿಸಿದ್ದಾರೆ.
ಬಿಹಾರ ರಾಜ್ಯದ ಬೆಂಗಳೂರಿನ ಕೆನರಾ ಬ್ಯಾಂಕ್ ಉದ್ಯೋಗಿಯಾದ ರಾಜೀವ್ ಕೋನದಾಸಪುರದಲ್ಲಿ ಫ್ಲಾಟ್ ಅನ್ನು ಖರೀದಿಸಿದ್ದು, ಕೋನದಾಸಪುರ ವಸತಿ ಸಮುಚ್ಛಯ ಕಟ್ಟಡದ ಬಗ್ಗೆ ವಿವರಿಸುತ್ತಾ ಫ್ಲಾಟ್ನ ಬೀಗದ ಕೀಲಿಯನ್ನು ಪಡೆದು ಸಂತಸ ಪಟ್ಟರು.
ಫ್ಲಾಟ್ ಮೇಳಕ್ಕೆ ಸುಮಾರು 700 ಸಾರ್ವಜನಿಕರು ಭೇಟಿ ನೀಡಿದ್ದು, 100ಕ್ಕೂ ಹೆಚ್ಚು ಸಾರ್ವಜನಿಕರು ಠೇವಣಿ ಮೊತ್ತವನ್ನು ಪಾವತಿಸಿ ಪ್ಲಾಟ್ ಕಾಯ್ದಿರಿಸಿದ್ದಾರೆ. 50 ಹಂಚಿಕೆದಾರರಿಗೆ ಸ್ಥಳದಲ್ಲಿಯೇ ಹಂಚಿಕೆ ಪತ್ರವನ್ನು ವಿತರಿಸಲಾಗಿದೆ. ಬ್ಯಾಂಕ್ ಆಯ್ಕೆ ವಿಳಂಬವಾಗಿರುವುದರಿಂದ ಫಲಾನುಭವಿಗಳು ಠೇವಣಿ ಹಣ ಹಾಗೂ ಪೂರ್ಣ ಹಣವನ್ನು ಪಾವತಿಸಲು ಕಾಲಾವಕಾಶವನ್ನು ಕೋರಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೌತ್ ಇಂಡಿಯನ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಹೆಚ್ಡಿಎಫ್ಸಿ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ಗಳ ಪ್ರತಿನಿಧಿಗಳು ಸ್ಥಳದಲ್ಲಿ ಹಾಜರಿದ್ದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಭಿಯಂತರ ಅಧಿಕಾರಿ ಮಲ್ಲಿಕಾರ್ಜುನಸ್ವಾಮಿ, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸಮೂರ್ತಿ, ಉಪ ಕಾರ್ಯದರ್ಶಿ ದೇವರಾಜು, ಕಾರ್ಯಪಾಲಕ ಅಭಿಯಂತರ ಪ್ರಕಾಶ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಇಂಬವಳ್ಳಿ, ಅರವಿಂದ್, ಸುನೀಲ್, ಬಸವರೆಡ್ಡಿ ಹಾಗೂ ಇತರೆ ಅಧಿಕಾರಿಗಳು ಮೇಳದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:ಬೆಂಗಳೂರು: ಬನಶಂಕರಿ ದೇವಸ್ಥಾನದಲ್ಲಿ ಭಕ್ತರು ಎಸೆದು ಹೋದ ವಸ್ತುಗಳಿಂದ ಗೊಬ್ಬರ ತಯಾರಿಕೆ
ಜನರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಬಿಡಿಎ ಇದೇ ಮೊದಲ ಬಾರಿಗೆ ಪ್ಲಾಟ್ ಮೇಳ ಆಯೋಜಿಸಿತ್ತು. ಈ ಮೇಳದಲ್ಲಿ ಬಿಡಿಎ ನಿರ್ಮಿಸಿರುವ ಅಪಾರ್ಟ್ಮೆಂಟ್ಗಳಲ್ಲಿನ ಪ್ಲಾಟ್ ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ಬೆಂಗಳೂರಲ್ಲಿ ಮನೆ ಹುಡುಕಾಟದಲ್ಲಿದ್ದವರು ಮೇಳದಲ್ಲಿ ಭಾಗವಹಿಸಿ ಪ್ಲಾಟ್ ಖರೀದಿಸಿದರು.