ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಾಕಿ ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದ One Time Settlement ಯೋಜನೆಯ ಅವಧಿಯನ್ನು ನವೆಂಬರ್ 30ರವರೆಗೆ ವಿಸ್ತರಿಸುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಆ ಮೂಲಕ ಬೆಂಗಳೂರು ಆಸ್ತಿ ಮಾಲೀಕರಿಗೆ ಬಾಕಿ ಆಸ್ತಿ ತೆರಿಗೆ ಪಾವತಿಸಲು ಹೆಚ್ಚಿನ ಕಾಲಾವಕಾಶ ನೀಡಲಾಗುತ್ತಿದೆ.
ಒನ್ ಟೈಮ್ ಸೆಟಲ್ಮೆಂಟ್ ಯೋಜನೆಯನ್ನು 30-11-2024ರವರೆಗೆ ವಿಸ್ತರಿಸಲು ಪಾಲಿಕೆ ಅಧಿನಿಯಮ, 2020ರ ಕಲಂ 144ಕ್ಕೆ ತಿದ್ದುಪಡಿ ತರುವ ಉದ್ದೇಶದ ಬಿಬಿಎಂಪಿ (ಎರಡನೇ ತಿದ್ದುಪಡಿ) ವಿಧೇಯಕ, 2024ಕ್ಕೆ ಅನುಮೋದನೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಈ ತಿದ್ದುಪಡಿ ಕಾಲಮಿತಿಗೆ ಒಳಪಟ್ಟಿರುವುದರಿಂದ ಹಾಗೂ ಕರ್ನಾಟಕ ವಿಧಾನ ಮಂಡಲ ಸಭೆಯನ್ನು ಅನಿರ್ದಿಷ್ಟ ಕಾಲಾವಧಿಗೆ ಮುಂದೂಡಿರುವುದರಿಂದ ತಿದ್ದುಪಡಿಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸುವಂತೆ ರಾಜ್ಯಪಾಲರನ್ನು ಕೋರಲು ತೀರ್ಮಾನಿಸಲಾಗಿದೆ. ಈ ಸಂಬಂಧ ಕಾರ್ಯಕಾರಿ ಆದೇಶ ಹೊರಡಿಸಿ ತಕ್ಷಣದಿಂದ ಜಾರಿಗೊಳಿಸಲು ಸಂಪುಟ ಸಭೆ ನಿರ್ಧರಿಸಿದೆ.
ಇದೇ ವೇಳೆ ಪಾಲಿಕೆ ವ್ಯಾಪ್ತಿಯಲ್ಲಿನ ಬಾಕಿ ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದ One Time Settlement ಯೋಜನೆಯ ಅಂತಿಮ ದಿನಾಂಕವನ್ನು 30.09.2024ರವರೆಗೆ ವಿಸ್ತರಿಸಿ 08.08.2024 ರಂದು ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ.
ಪೆರಿಫೆರಲ್ ರಸ್ತೆ ನಿರ್ಮಾಣಕ್ಕೆ ಶೇ 75 ಸಾಲದ ಮೊರೆ:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬೆಂಗಳೂರು ರಿಂಗ್ ಪೆರಿಫರಲ್ ರಸ್ತೆ ಯೋಜನೆ/ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಯ ಅನುಷ್ಠಾನಕ್ಕಾಗಿ ಶೇ 75% ಸಾಲ ಮಾಡಲು ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಪೆರಿಫೆರಲ್ ರಿಂಗ್ ರಸ್ತೆಗೆ 27,000 ಕೋಟಿ ರೂ. ಯೋಜನಾ ವೆಚ್ಚ ಅಂದಾಜಿಸಲಾಗಿದೆ. ಇದರಲ್ಲಿ ಶೇ 75 ಸಾಲ ಮಾಡಲು ಒಪ್ಪಿಗೆ ಸೂಚಿಸಲಾಗಿದೆ.
ಆರ್ಥಿಕ ಇಲಾಖೆಯು ಅಭಿಪ್ರಾಯದಂತೆ ಪೆರಿಫೆರಲ್ ರಸ್ತೆ/ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ಅಗತ್ಯವಿರುವ ಹಣಕಾಸನ್ನು ವಿವಿಧ ಹಣಕಾಸು ಏಜೆನ್ಸಿಗಳ ಮುಖಾಂತರ ಹಾಗೂ ಹೆಚ್ಚುವರಿ ಹಣಕಾಸು ಲಭ್ಯವಿರುವ ರಾಜ್ಯ ಸರ್ಕಾರದ ಉದ್ದಿಮೆಗಳಿಂದ ಬಂಡವಾಳ ರೂಪದಲ್ಲಿ ಪಡೆಯಲು ಒಪ್ಪಿಗೆ ಸೂಚಿಸಲಾಗಿದೆ. ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲದ ಮೊತ್ತಕ್ಕೆ ರಾಜ್ಯ ಸರ್ಕಾರದ ವತಿಯಿಂದ ಗ್ಯಾರಂಟಿ ನೀಡಲು ಮತ್ತು ಬಡ್ಡಿ ರೂಪದಲ್ಲಿ ಪಾವತಿಸುವ ಮೊತ್ತಕ್ಕೆ ಬಡ್ಡಿ ಮರುಪಾವತಿಯನ್ನು ಸರ್ಕಾರದ ಅನುದಾನದ ಮುಖಾಂತರ ಪಾವತಿಸಲು ಆಯವ್ಯಯದಲ್ಲಿ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ.