ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ 2024-25ನೇ ಸಾಲಿನಲ್ಲಿ 12,369.46 ಕೋಟಿ ರೂ. ಬಜೆಟ್ ಮಂಡಿಸಿದೆ. ಒಟ್ಟು 2.17 ಕೋಟಿ ರೂ. ಉಳಿತಾಯದ ಬಜೆಟ್ ಇದಾಗಿದೆ. ಗುರುವಾರ ನಗರದ ಪುಟ್ಟಣ್ಣ ಚೆಟ್ಟಿ ಸಭಾಂಗಣದಲ್ಲಿ ಬಿಬಿಎಂಪಿ 2024-25ನೇ ಸಾಲಿನ ಆಯವ್ಯಯವನ್ನು ಆಡಳಿತಗಾರ ರಾಕೇಶ್ ಸಿಂಗ್ ಅಧ್ಯಕ್ಷತೆಯಲ್ಲಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉಪಸ್ಥಿತಿಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಪ್ರಸ್ತುತ ಪಡಿಸಿದರು.
2024-25ನೇ ವರ್ಷದಲ್ಲಿ ಪಾಲಿಕೆಯ ಆದಾಯವು ಪ್ರಾರಂಭಿಕ ಶುಲ್ಕ ಸೇರಿ ಒಟ್ಟು ಸ್ವೀಕೃತಿ 12,371.63 ಕೋಟಿ ರೂ.ಗಳಷ್ಟು ಇದ್ದು, ಒಟ್ಟು ಖರ್ಚು 12,369.46 ಕೋಟಿ ರೂ. ಇರಲಿದೆ ಎಂದು ಶಿವಾನಂದ ಕಲಕೇರಿ ಬಜೆಟ್ ಭಾಷಣದಲ್ಲಿ ತಿಳಿಸಿದರು. ಈ ವೇಳೆ ವಿಶೇಷ ಆಯುಕ್ತರು, ವಲಯ ಆಯುಕ್ತರು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪಾಲಿಕೆ ವ್ಯಾಪ್ತಿಯಲ್ಲಿನ 20 ಲಕ್ಷ ಆಸ್ತಿಗಳ ಗಣಕೀಕರಣ:ಪಾಲಿಕೆ ವ್ಯಾಪ್ತಿಯಲ್ಲಿರುವ 20 ಲಕ್ಷ ಆಸ್ತಿಗಳನ್ನು ಗಣಕೀಕರಣಗೊಳಿಸಿ, ಇ-ಖಾತಾ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಮತ್ತು ಕಾವೇರಿ-2 ತಂತ್ರಾಂಶದೊಂದಿಗೆ ಪಾಲಿಕೆಯ 'ನಮ್ಮ ಸ್ವತ್ತು' ವ್ಯವಸ್ಥೆಯನ್ನು ಸಂಯೋಜನೆ ಮಾಡಲಾಗುವುದು ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.
ಪಾಲಿಕೆಯ ಕಂದಾಯ ವಿಭಾಗದ ಅವವ್ಯಯದ ಸಂಬಂಧ ಮಾತನಾಡಿ, ಆಸ್ತಿ ತೆರಿಗೆ ಮೇಲಿನ ಬಡ್ಡಿ ಮತ್ತು ದಂಡಕ್ಕೆ ಸಂಬಂಧಿಸಿದಂತೆ ಆಸ್ತಿ ತೆರಿಗೆದಾರರಿಗೆ ಓ. ಟಿ.ಎಸ್ ಜಾರಿಗೆ ತಂದಿದ್ದು, ಇದರಿಂದ 15 ಲಕ್ಷ ತೆರಿಗೆದಾರರಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಮಾರ್ಗದರ್ಶನ ಮೌಲ್ಯ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಏಪ್ರಿಲ್ 1 ರಿಂದ ಜಾರಿಗೆ ತರಲಾಗಲಿದೆ. ಪಾಲಿಕೆಯಲ್ಲಿ ಹೊಸ ಜಾಹೀರಾತು ನೀತಿಯನ್ನು ಜಾರಿಗೆ ತರಲಾಗುವುದು ಮತ್ತು ಇದರಿಂದ 500 ಕೋಟಿ ರೂ.ಗಳಷ್ಟು ಜಾಹೀರಾತು ಆದಾಯವನ್ನು ಗಳಿಸುವ ನೀರಿಕ್ಷೆಯಿದೆ. ಒಟ್ಟು 6000 ಕೋಟಿಯ ರೂ ಅಸ್ತಿ ತೆರಿಗೆ ನಿರೀಕ್ಷಿಸಲಾಗಿದೆ. ಪ್ರೀಮಿಯಂ ಎಫ್‌ಎಆರ್ ವ್ಯವಸ್ಥೆಯನ್ನು ಜಾರಿಗೆ ತಂದು ಇದರಿಂದ 1000 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದೇವೆ ಎಂದು ವಿವರಿಸಿದರು.