ಬೆಂಗಳೂರು: ನಗರದ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ತೀವ್ರಗೊಳಿಸಿದೆ.
ಈ ತಿಂಗಳಿನಲ್ಲಿ 756 ಮರಗಳು ನೆಲಕ್ಕುರುಳಿರುವ ಹಾಗೂ ಮರದ ಕೊಂಬೆಗಳು ಬಿದ್ದ ಬಗ್ಗೆ ದೂರುಗಳು ದಾಖಲಾಗಿವೆ. ಈ ದೂರುಗಳನ್ನು ಪರಿಹರಿಸಲಾಗಿದೆ. ಪ್ರತಿ ವಲಯದಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ತಿಂಗಳು ಮಳೆಗಾಲದ ಗರಿಷ್ಠ ಅವಧಿಯಾಗಿರುವುದರಿಂದ ಅಪಾಯಕಾರಿ ಮರಗಳು ಮತ್ತು ಕೊಂಬೆಗಳನ್ನು ಗುರುತಿಸುವ ಚಟುವಟಿಕೆ ನಡೆಸಲಾಗುತ್ತಿದೆ. ದೂರುಗಳ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕತ್ತರಿಸಿದ ಮರ ಹಾಗೂ ಕೊಂಬೆಗಳನ್ನು ಪಾಲಿಕೆ ನೇಮಿಸಿರುವ ಸಂಸ್ಥೆಗಳು ಸಾಗಣೆಯ ಕೆಲಸ ಮಾಡುತ್ತಿವೆ. ಈ ಮರಗಳನ್ನು ಬಿಬಿಎಂಪಿಯ ಅರಣ್ಯಾಧಿಕಾರಿಗಳು ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಆಯಾ ವಲಯಗಳಲ್ಲಿನ ಶೆಡ್‌ಗಳಿಗೆ ರವಾನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ಮೃತಪಟ್ಟ ಆಟೋ ಚಾಲಕನ ಕುಟುಂಬದ ಸದಸ್ಯರಿಗೆ ಪಾಲಿಕೆ ವತಿಯಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಆಸ್ಪತ್ರೆ ಶುಲ್ಕ ಹಾಗೂ ಶವಸಂಸ್ಕಾರದ ಶುಲ್ಕವನ್ನೂ ಪಾಲಿಕೆಯೇ ಭರಿಸಿದೆ. ಮರ ಬಿದ್ದು ಬೆನ್ನುಮೂಳೆಗೆ ಪೆಟ್ಟಾಗಿದ್ದ ಮಾಣಿಕ್ಯವೇಲ್ ಹಾಗೂ ತೊಡೆ ಮೂಳೆ ಮುರಿತಕ್ಕೆ ಒಳಗಾಗಿದ್ದ ವಿಜಯಲಕ್ಷ್ಮಿ ಅವರಿಗೂ ಪಾಲಿಕೆ ವತಿಯಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಇನ್ನು ಒಂದು ಮಗು ಕೈ ಮೂಳೆ ಮುರಿತಕ್ಕೆ ಒಳಗಾಗಿದ್ದು, 1 ಲಕ್ಷ ರೂಪಾಯಿ ನೀಡಲಾಗಿದೆ. ಸಣ್ಣಪುಟ್ಟ ಗಾಯಕ್ಕೊಳಗಾಗಿರುವ ಮೂವರು ಮಕ್ಕಳಿಗೆ ತಲಾ 20 ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಮರಗಳ ಹನನ ಹೆಚ್ಚಳ; ರಾಷ್ಟ್ರೀಯ ಸಮೀಕ್ಷೆಯಲ್ಲಿ ಬಹಿರಂಗ