ಕರ್ನಾಟಕ

karnataka

ETV Bharat / state

ಜೇನುಕೃಷಿಯಿಂದ ಲಾಭ: ಜೇನು ಸಾಕಾಣಿಕೆಯಲ್ಲಿ ಯಶಸ್ವಿಯಾದ ಬಿಬಿಎಂ ಪದವೀಧರ - Honey

ಮೂರು ಜೇನುಪೆಟ್ಟಿಗೆಗಳಿಂದ ಜೇನು ಸಾಕಾಣಿಕೆ ಆರಂಭಿಸಿದ್ದ ಯುವ ರೈತ ಶಶಿಕುಮಾರ್​ ಅವರು ಇಂದು 40ಕ್ಕೂ ಹೆಚ್ಚು ಜೇನು ಕುಟುಂಬಗಳ ಮಾಲೀಕರಾಗಿದ್ದಾರೆ.

Bee Farmer Shashikumar
ಜೇನು ಕೃಷಿಕ ಶಶಿಕುಮಾರ್​

By ETV Bharat Karnataka Team

Published : Mar 6, 2024, 5:50 PM IST

Updated : Mar 6, 2024, 8:05 PM IST

ದಾವಣಗೆರೆ:ಬಿಬಿಎಂ ಪದವೀಧರ ಯುವಕನೊಬ್ಬ, ಕೈ ತುಂಬಾ ಸಂಬಳ ತರುತ್ತಿದ್ದ ಖಾಸಗಿ ಗೋಲ್ಡ್​​ ಕಂಪನಿ ಕೆಲಸಕ್ಕೆ ಗುಡ್​ ಬೈ​ ಹೇಳಿ, ಜೇನುಕೃಷಿ ಮಾಡಿ ಯಶಸ್ವಿಯಾದ ಯುವಕನ ಯಶೋಗಾಥೆ ಇದು. ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡ ಅಬ್ಬಿಗೆರೆ ಗ್ರಾಮದ ನಿವಾಸಿ ಶಶಿಕುಮಾರ್​ ಬರಗಾಲದಲ್ಲೂ ಜೇನುಕೃಷಿಯಿಂದ ಸಿಹಿ ತೆಗೆದಿರುವ ಯುವಕ.

ಜೇನು ಸಾಕಾಣಿಕೆಗೆ ಕೈ ಹಾಕಿ ಯಶಸ್ವಿಯಾದ ಬಿಬಿಎಂ ಪದವೀಧರ

ಶಶಿಕುಮಾರ್​ ಅವರು ಖಾಸಗಿ ಕಂಪೆನಿಯಲ್ಲಿ ಮಾಡುತ್ತಿದ್ದ ಕೆಲಸವನ್ನು ಬಿಟ್ಟು, ತಮ್ಮ ಅಡಿಕೆ ತೋಟದಲ್ಲಿ ಜೇನುಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಂತೇಬೆನ್ನೂರು ಸಮೀಪದ ಕೊಂಡದಹಳ್ಳಿ ಗ್ರಾಮದಲ್ಲಿ ತಮ್ಮ ಎಕರೆ ಅಡಿಕೆ ತೋಟದಲ್ಲಿರುವ ಒಟ್ಟು 1,200 ಅಡಿಕೆ ಗಿಡಗಳ ಮಧ್ಯೆ ಜೇನುಪೆಟ್ಟಿಗೆಗಳನ್ನು ಇಟ್ಟು, ಜೇನುತುಪ್ಪದಿಂದ ಲಾಭ ಗಳಿಸುತ್ತಿದ್ದಾರೆ. ಜೇನುತುಪ್ಪ ಮಾತ್ರವಲ್ಲದೆ, ಜೇನು ಕುಟುಂಬಗಳನ್ನೂ ಮಾರಾಟ ಮಾಡುತ್ತ ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ ಯುವರೈತ.

ಯುವ ರೈತರಿಗೆ ಮಾದರಿ; ಬರಗಾಲದಲ್ಲಿ ತೋಟದಲ್ಲಿ ಬೇರೆ ಬೆಳೆಗಳನ್ನು ಹಾಕಿ, ಕೈಸುಟ್ಟುಕೊಳ್ಳುವ ಬದಲು, ಜೇನುಕೃಷಿ ಮಾಡಿ ಲಾಭ ಗಳಿಸುತ್ತಿರುವ ಶಶಿಕುಮಾರ್​, ಇತರ ಯುವ ರೈತರಿಗೆ ಮಾದರಿಯಾಗಿದ್ದಾರೆ. ಐದು ವರ್ಷಗಳಿಂದ ಜೇನುಕೃಷಿ ಮಾಡಿಕೊಂಡು ಬರುತ್ತಿರುವ ಯುವ ರೈತ ಶಶಿಕುಮಾರ್ ಆರಂಭದಲ್ಲಿ ಮನೆಗಾಗಿ ಜೇನುತುಪ್ಪ ಬೇಕೆಂದು ಒಂದು ಜೇನು ಪೆಟ್ಟಿಗೆಯಲ್ಲಿ ಜೇನು ಸಾಕಾಣಿಕೆ ಆರಂಭಿಸಿದ್ದರು. ಹಾಗೆಯೇ ಜೇನುಕೃಷಿ ಮಾಡಲು ಪ್ರೇರಣೆ ಹೆಚ್ಚಾಗಿ ಮೇಟಿಕುರ್ಕಿ ಗ್ರಾಮದ ಶಾಂತವೀರಯ್ಯ ಎಂಬುವವರನ್ನು ಶಶಿಕುಮಾರ್ ಭೇಟಿಯಾಗಿದ್ದಾರೆ.

ಆಗ ಜೇನು ಸಾಕಾಣಿಕೆ ಬಗ್ಗೆ ತರಬೇತಿ ಪಡೆಯಲು ಶಾಂತವೀರಯ್ಯ ಅವರು ಮೈರಾಳ ಗ್ರೀನ್ ಕಾಲೇಜಿಗೆ ಶಿಫಾರಸ್ಸು ಮಾಡಿದ್ದರು. ಬಳಿಕ ಶಶಿಕುಮಾರ್ ಮೈರಾಳ ಗ್ರೀನ್ ತರಬೇರಿ ಕಾಲೇಜಿನಲ್ಲಿ ತರಬೇತಿ ಪಡೆದು ಜೇನುಕೃಷಿ ಆರಂಭಿಸಿದ್ದರು. ಅಂದು ತರಬೇತಿ ಪಡೆದು ಮೂರು ಜೇನು ಪೆಟ್ಟಿಗೆಗಳನ್ನು ಪಡೆದು ಆರಂಭಿಸಿದ ಜೇನುಕೃಷಿ ಇದೀಗ 40 ಪೆಟ್ಟಿಗೆಗಳಿಗೆ ಬಂದು ನಿಂತಿದೆ.

2019ರಿಂದ ಈ ಜೇನುಕೃಷಿ ಮಾಡಿಕೊಂಡು ಬರುತ್ತಿರುವ ಶಶಿಕುಮಾರ್ ಆರಂಭದ ದಿನಗಳಲ್ಲಿ ನಷ್ಟ ಅನುಭವಿಸಿದ ಉದಾಹರಣೆಗಳೂ ಇವೆ. "ಒಂದು ಜೇನು ಪೆಟ್ಟಿಗೆಯಲ್ಲಿ ಎರಡು ಕೆಜಿ ಜೇನುತುಪ್ಪ ಸಿಗುತ್ತದೆ. ನಾವು ಒಂದು ಕೆಜಿ ಜೇನುತುಪ್ಪವನ್ನು ಒಂದು ಸಾವಿರ ರೂಪಾಯಿಗೆ ಮಾರಾಟ ಮಾಡುತ್ತೇವೆ. 250 ಗ್ರಾಂಗೆ 250 ರೂಪಾಯಿ ಬೆಲೆ ಇದೆ. ಇದು ದೇಶಿ ಜೇನುತುಪ್ಪ. ಕಳೆದ ವರ್ಷ 20 ಕೇಜಿ ಜೇನುತುಪ್ಪವನ್ನು ಮಾರಾಟ ಮಾಡಿದ್ದೆ. ಈ ಬಾರಿಯೂ 20 ಕೆಜಿ ಜೇನುತುಪ್ಪ ಬರಲಿದೆ" ಎನ್ನುತ್ತಾರೆ ಶಶಿಕುಮಾರ್​.

ಶಶಿಕುಮಾರ್​ ಅವರ ಜೇನುಕೃಷಿಯನ್ನು ಕಂಡು, ಇವರ ತೋಟಕ್ಕೆ ಹಲವಾರು ರೈತರು ಬಂದು ನೋಡಿ, ಮಾಹಿತಿ ಪಡೆದುಕೊಂಡು ಹೋಗಿ ಅವರೂ ಕೃಷಿಯಲ್ಲಿ ತೊಡಗಿಸಿಕೊಂಡ ಉದಾಹರಣೆಗಳಿವೆ.

ಯುವ ರೈತ ಶಶಿಕುಮಾರ್ ಮಾತು:ಈಟಿವಿ ಭಾರತ ಜೊತೆ ಮಾತನಾಡಿದ ಶಶಿಕುಮಾರ್, "ಐದು ವರ್ಷಗಳಿಂದ ಜೇನುಕೃಷಿ ಮಾಡುತ್ತಿದ್ದೇನೆ. ಆರಂಭದಲ್ಲಿ ಮೂರು ಜೇನು ಬಾಕ್ಸ್ ಪಡೆದು ಆರಂಭಿಸಿದ್ದು, ಇದೀಗ 40 ಬಾಕ್ಸ್​ಗಳಿಗೆ ಬಂದು ನಿಂತಿದೆ. ಇನ್ನು ಹದಿನೈದು ದಿನ ಕಳೆದರೆ 70 ರಿಂದ 75 ಬಾಕ್ಸ್ ಆಗಲಿವೆ. ಇದೀಗ ಬರಗಾಲ, ಈ ಸಮಯದಲ್ಲಿ ತೋಟದಲ್ಲಿ ಬೇರೆ ಬೆಳೆ ಬೆಳೆಯುವ ಬದಲಿಗೆ, ಜೇನು ಕೃಷಿಯನ್ನೇ ಮಾಡಿದರೆ, ಇದರಿಂದ ಜೇನುತುಪ್ಪ ಹಾಗು ಜೇನುಕುಟುಂಬಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಒಂದು ಜೇನು ಕುಟುಂಬವನ್ನು ಒಂದು ಸಾವಿರ ರೂಪಾಯಿಗೆ ಮಾರಾಟ ಮಾಡುತ್ತೇನೆ. 20 ಕೆಜಿ ಜೇನುತುಪ್ಪ, ಇಪ್ಪತ್ತು ಜೇನು ಕುಟುಂಬಗಳಿಂದ ಹಣ ಗಳಿಸಬಹುದು. ಜೇನುಕೃಷಿ ಮಾಡಲು ಬಯಸುವ ರೈತರು ಈ ಜೇನುಕುಟುಂಬಗಳನ್ನು ಖರೀದಿ ಮಾಡುತ್ತಿದ್ದಾರೆ. ಇನ್ನು ಜೇನುಕುಟುಂಬ, ಬಾಕ್ಸ್, ಅದರ ಸ್ಟ್ಯಾಂಡ್, ಎಲ್ಲಾ ಸೇರಿ ನಾಲ್ಕು ಸಾವಿರ ರೂಪಾಯಿಗಳಿಗೆ ಮಾರಾಟ ಮಾಡುತ್ತೇನೆ" ಎಂದು ಶಶಿಕುಮಾರ್ ಮಾಹಿತಿ ನೀಡಿದರು.

ಇದನ್ನೂ ಓದಿ:ನಾಲ್ಕು ಎಕರೆಯಲ್ಲಿ 40 ಕ್ವಿಂಟಾಲ್ ಬೆಳ್ಳುಳ್ಳಿ; ಬರದಲ್ಲೂ ಬಂಗಾರದ ಬೆಳೆ ಪಡೆದ ಹಾವೇರಿಯ ಸಾವಯವ ಕೃಷಿಕರು

Last Updated : Mar 6, 2024, 8:05 PM IST

ABOUT THE AUTHOR

...view details