ಬೆಂಗಳೂರು:ರಾಜ್ಯದ ಹಿರಿಯ ರಾಜಕಾರಣಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸತತವಾಗಿ ಒಂದೇ ಕ್ಷೇತ್ರದಿಂದ 8 ಬಾರಿ ಆಯ್ಕೆಯಾದ ಸಾಧನೆಗಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಯಾಗಿದ್ದಾರೆ. ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ 8 ಬಾರಿ ವಿಧಾನ ಪರಿಷತ್ಗೆ ಆಯ್ಕೆ ಆಗಿರುವ ಹೊರಟ್ಟಿ ಅವರು ದಾಖಲೆ ಬರೆದಿದ್ದಾರೆ.
ಹೊರಟ್ಟಿ ಸಾಧನೆ ಕುರಿತು..: ರಾಜಕೀಯದಲ್ಲಿ ಕಳೆದ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಅವಧಿ ಸಾರ್ವಜನಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ಏಕೈಕ ಕನ್ನಡಿಗ ಎನ್ನುವ ಹಿರಿಮೆ ಬಸವರಾಜ ಹೊರಟ್ಟಿಯವರದ್ದು. ಪರಿಷತ್ತಿನ ಪಶ್ಚಿಮ ಶಿಕ್ಷಕರ ಒಂದೇ ಕ್ಷೇತ್ರದಿಂದ ಸತತ ಎಂಟು ಬಾರಿ ಚುನಾಯಿತರಾಗಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಕಳೆದ 43 ವರ್ಷಗಳಿಂದ ಪರಿಷತ್‌ನಲ್ಲಿ ಶಿಕ್ಷಕರ ಹಿತಕ್ಕೆ ಹೊರಟ್ಟಿ ಶ್ರಮಿಸುತ್ತಿದ್ದಾರೆ.
ಏನಿದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್?:1990ರಲ್ಲಿ ಆರಂಭಗೊಂಡ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಭಾರತೀಯರ ವಿಶ್ವ ದಾಖಲೆಗಳನ್ನು ದಾಖಲಿಸುವ ಸಂಸ್ಥೆ. ಭಾರತದಲ್ಲಿ ಪ್ರಕಟವಾದ 2024ನೇ ಸಾಲಿನ ವಾರ್ಷಿಕ ಪುಸ್ತಕದಲ್ಲಿ ಬಸವರಾಜ ಹೊರಟ್ಟಿ ಐತಿಹಾಸಿಕ ದಾಖಲೆಗಳನ್ನು ದಾಖಲಿಸಿ ಪ್ರಕಟಿಸಲಾಗಿದೆ.
ಈ ಬಾರಿಯ ವಾರ್ಷಿಕ ಪುಸ್ತಕದಲ್ಲಿ ಸಿಕ್ಕಿಂ ರಾಜ್ಯದ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಅವರು 24 ವರ್ಷ 165 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಸಲ್ಲಿಸಿದ ಸೇವಾವಧಿ ದಿನಗಳನ್ನು ದಾಖಲಿಸಲಾಗಿದೆ. ಇದರ ಜೊತೆಗೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರ 23 ವರ್ಷ 137 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ದಾಖಲಿಸಲಾಗಿದೆ.