ಹಾವೇರಿ : ಗುಂಪುಗಾರಿಕೆಯಿಂದ ಕ್ರಾಸ್ ವೋಟಿಂಗ್ ಆಗುವ ಭಯದಲ್ಲಿ ಕಾಂಗ್ರೆಸ್ನವರು ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಸವಣೂರು ತಾಲೂಕಿನ ಗುಂಡೂರು ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ಬಿಜೆಪಿ ಶಾಸಕರ ಸಂಖ್ಯೆ 66 ಇದ್ದು, ಜೆಡಿಎಸ್ನಲ್ಲಿ 19 ಶಾಸಕರಿದ್ದಾರೆ. ರಾಜ್ಯಸಭೆಯ ಒಂದು ಸ್ಥಾನಕ್ಕೆ ಬೇಕಾಗುವ ಶಾಸಕರ ಸಂಖ್ಯೆ ಮೀರಿ 40 ಶಾಸಕರ ಸಂಖ್ಯೆ ಹೆಚ್ಚಿದೆ. ಹೀಗಾಗಿಯೇ ಕುಪೇಂದ್ರ ರೆಡ್ಡಿ 5ನೇ ಅಭ್ಯರ್ಥಿ ಆಗಿ ಕಣಕ್ಕಿಳಿದಿದ್ದಾರೆ. ನಾಲ್ಕು ಜನ ಶಾಸಕರು ಇಂಡಿಪೆಂಡೆಂಟ್ ಇದ್ದಾರೆ. ಕಾಂಗ್ರೆಸ್ನವರಿಗೆ ಮೂವರನ್ನು ಆಯ್ಕೆ ಮಾಡಲು ಯಾವುದೇ ತೊಂದರೆ ಇಲ್ಲ. ಆದರೆ ಅವರಲ್ಲಿ ಗುಂಪುಗಾರಿಕೆ ಇರುವುದು ಬಹಳ ಸ್ಪಷ್ಟವಾಗಿದೆ. ಹೀಗಾಗಿ ಅವರ ಗುಂಪುಗಾರಿಕೆಯಿಂದ ಕ್ರಾಸ್ ವೋಟಿಂಗ್ ಆಗುವ ಭಯದಲ್ಲಿ ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಕೂಡಾ ಅವರ ಪ್ರಭಾವ ಬೀರುತ್ತಿದ್ದಾರೆ. ಆದರೆ ನಮಗೆ ವಿಶ್ವಾಸ ಇದೆ. ಕುಪೇಂದ್ರ ರೆಡ್ಡಿ ಅವರು ಕೂಡಾ ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವರಿಷ್ಠರು ನಿರ್ಧರಿಸುತ್ತಾರೆ ಎಂದ ಬೊಮ್ಮಾಯಿ: ಲೋಕಸಭಾ ಚುನವಾಣೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧಿಸುವ ಬಗ್ಗೆ ಕೇಳಿದಾಗ ಹಾವೇರಿ - ಗದಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧಿಸುವ ಬಗ್ಗೆ ನಮ್ಮ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.