ಕರ್ನಾಟಕ

karnataka

ETV Bharat / state

ಪುತ್ರನಿಗೆ ಟಿಕೆಟ್: ಪಕ್ಷದ ತೀರ್ಮಾನ ಬೇಡ ಎನ್ನಲಾಗದೆ ಒಪ್ಪಿದೆ- ಬಸವರಾಜ ಬೊಮ್ಮಾಯಿ - BASAVARAJ BOMMAI

ಪಕ್ಷವೇ ನಂಬಿಕೆ ಇಟ್ಟು ಮಗನಿಗೆ ಅವಕಾಶ ಕೊಟ್ಟಿದೆ. ನಾನು ಏನೇ ಆಗಿದ್ದರೂ ಅದಕ್ಕೆ ಪಕ್ಷ ಕಾರಣ. ಕಾರ್ಯಕರ್ತರು ಸಹ ಕೈ ಬಿಡಬೇಡಿ, ನಾವು ಗೆಲ್ಲಬೇಕು ಎಂದಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

by-election
ಬಸವರಾಜ ಬೊಮ್ಮಾಯಿ (ETV Bharat)

By ETV Bharat Karnataka Team

Published : Oct 20, 2024, 1:58 PM IST

ಬೆಂಗಳೂರು:''ನನ್ನ ಮಗನಿಗೆ ಪಕ್ಷವೇ ವಿಶ್ವಾಸದಿಂದ ಟಿಕೆಟ್​ ನೀಡಲು ತೀರ್ಮಾನಿಸಿರುವಾಗ ನಾನು ಬೇಡ ಎನ್ನಲು ಆಗಲಿಲ್ಲ. ನನ್ನ ಮನಸ್ಸಿನ ಭಾವನೆ ಏನೇ ಇದ್ದರೂ, ಪಾರ್ಟಿಯೇ ತೀರ್ಮಾನ ಮಾಡಿರುವಾಗ ಒಪ್ಪಿದೆ‌'' ಎಂದು ಸಂಸದ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.

ಆರ್.ಟಿ.ನಗರ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಮನಸಲ್ಲಿ ಏನೇ ಇದ್ದರೂ ಪಕ್ಷ, ಸಮಾಜ ಹಾಗೂ ಕಾರ್ಯಕರ್ತರಿಗಾಗಿ ಪಕ್ಷದ ತೀರ್ಮಾನಕ್ಕೆ ತಲೆಬಾಗುತ್ತೇನೆ. ಎರಡು ದಿನ ಸಮಯ ಕೇಳಿದ್ದೆ. ಆದರೆ ಸಮಯ ಕೊಡದೇ ಟಿಕೆಟ್ ಘೋಷಣೆ ಮಾಡಿದ್ದಾರೆ. ನಡ್ಡಾ ಅವರು ನನಗೆ ಮಾತನಾಡುವುದಕ್ಕೆ ಅವಕಾಶವನ್ನೇ ನೀಡಲಿಲ್ಲ'' ಎಂದು ತಿಳಿಸಿದರು.

ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ (ETV Bharat)

''ನಿಮ್ಮ ಮಗನಿಗೆ ಟಿಕೆಟ್. ಅಲ್ಲಿ ನಿಮಗೆ ಹೆಸರಿದೆ, ಗೆಲುವು ಮುಖ್ಯ ಎಂದರು. ನಾನು ಎರಡು ದಿನ ಸಮಯ ನೀಡಿ ಎಂದೆ, ಆದರೆ ಅವರು ಅದಕ್ಕೆ ಅವಕಾಶ ನೀಡಲೇ ಇಲ್ಲ. ನಿರ್ಧಾರ ಆಗಿದೆ, ಸರ್ವೇ ವರದಿ ಕೂಡ ಭರತ್ ಪರ ಇದೆ ಎಂದು ಅಮಿತ್ ಶಾ ಕೂಡ ಹೇಳಿದರು. ಚುನಾವಣೆ ಎದುರಿಸಿ, ಗೆಲ್ಲಬೇಕು ಎಂದರು. ಹೀಗಾಗಿ, ನಾನು ವರಿಷ್ಠರ ನಿರ್ಧಾರಕ್ಕೆ ತಲೆಬಾಗಿದ್ದೇನೆ. ಈ ಬಾರಿ ಭರತ್​ಗೆ ಟಿಕೆಟ್ ಬೇಡ ಎಂಬುದು ನನ್ನ ಅಪೇಕ್ಷೆ ಇತ್ತು'' ಎಂದು ಹೇಳಿದರು.

''ಭರತ್ ಆಯ್ಕೆ ವಿಚಾರದಲ್ಲಿ ಪಕ್ಷದ ಹಿತದೃಷ್ಟಿ, ಪ್ರಸ್ತುತ ರಾಜಕೀಯ ಹಾಗೂ ಕ್ಷೇತ್ರದ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಹೈಕಮಾಂಡ್ ನಾಯಕರು ತಿಳಿಸಿದ್ದಾರೆ. ಬೇರೆ ಯಾರಿಗೇ ಸ್ಥಳೀಯವಾಗಿ ಕೊಟ್ಟರೂ ನಾನು ಮಗನ ರೀತಿಯಲ್ಲೇ ಕೆಲಸ ಮಾಡುತ್ತೇನೆ ಅಂದೆ. ಆದರೆ, ನನ್ನ ಮಾತನ್ನು ಒಪ್ಪದೇ ಇದು ಸರ್ವಸಮ್ಮತ ನಿರ್ಧಾರ, ಚುನಾವಣೆ ಗೆದ್ದು ಬನ್ನಿ ಎಂದಿದ್ದಾರೆ. ಈ ಬೈ-ಎಲೆಕ್ಷನ್ ಸವಾಲು ಕೂಡಾ ಆಗಿದೆ. ಹಿಂದೆ ಅನೇಕ ಉಪಚುನಾವಣೆ ಎದುರಿಸಿದ ಅನುಭವವಿದೆ. ಈ ನಿರ್ಧಾರದಲ್ಲಿ ಎಲ್ಲವೂ ರಾಜಕೀಯ ಮೀರಿದೆ'' ಎಂದರು.

ಚನ್ನಪಟ್ಟಣ ಟಿಕೆಟ್​ ಗೊಂದಲ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, ''ಚನ್ನಪಟ್ಟಣದಲ್ಲಿ ಗೆಲ್ಲುವ ದೃಷ್ಟಿಯಿಂದ ಎರಡೂ ಕಡೆಯೂ ಸಭೆಗಳಾಗುತ್ತಿವೆ. ಎನ್‌ಡಿಎ ಒಮ್ಮತದ ಅಭ್ಯರ್ಥಿ ಆಯ್ಕೆ ಆಗಲಿದೆ. ಚನ್ನಪಟ್ಟಣದಲ್ಲಿ ನಮ್ಮದೇ ಗೆಲುವು. ಡಿಕೆಶಿಯವರು ಏನೇನೋ ಮಾತನಾಡುತ್ತಾರೆ, ಅದಕ್ಕೆಲ್ಲ ಉತ್ತರ ಕೊಡಕ್ಕಾಗಲ್ಲ'' ಎಂದು ಹೇಳಿದರು.

ರಾಜ್ಯ ಸರ್ಕಾರಕ್ಕೆ ಜಾತಿ ಜನಗಣತಿ ಅಧಿಕಾರವಿಲ್ಲ:ಜಾತಿ ಜನಗಣತಿ ಕುರಿತು ಶಾಮನೂರು ಶಿವಶಂಕರಪ್ಪ ಭೇಟಿ ಮಾಡಿದ ವಿಚಾರದ ಕುರಿತು ಮಾತನಾಡಿದ ಬೊಮ್ಮಾಯಿ, ''ಇದರ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ. ಇದು ಜಾತಿ ಜನಗಣತಿ. ರಾಜ್ಯ ಸರ್ಕಾರಕ್ಕೆ ಅದನ್ನು ಮಾಡುವ ಅಧಿಕಾರ ಇಲ್ಲ. ಕೇಂದ್ರ ಸರ್ಕಾರಕ್ಕೆ ಮಾತ್ರ ಜಾತಿ ಗಣತಿ ಮಾಡುವ ಅಧಿಕಾರವಿರುವುದು. ಇವರು ಯಾವುದೋ ಸರ್ವೆ ಮಾಡಿ, ಅದಕ್ಕೆ ಜಾತಿ ಗಣತಿಯ ಲೇಪನ ಮಾಡುತ್ತಿದ್ದಾರೆ. ಈ ವರದಿ ವೈಜ್ಞಾನಿಕವಾಗಿಯೂ ಇಲ್ಲ, ಅಂಕಿ‌-ಅಂಶಗಳೂ ಸಮರ್ಪಕವಾಗಿಲ್ಲ. ಹಲವು ಸಮುದಾಯಗಳಿಂದ ಆಕ್ಷೇಪಣೆ ಬಂದಿದೆ. ಎಲ್ಲ ಸಮುದಾಯಗಳ ಅನುಮಾನ ದೂರ‌ ಮಾಡುವ ಕೆಲಸವನ್ನು ಸಿಎಂ ಮಾಡುತ್ತಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಲಿ. ಸಿದ್ದರಾಮಯ್ಯ ಅವರ ಪಕ್ಷದಲ್ಲೇ ಜಾತಿ ಜನಗಣತಿ ವರದಿಗೆ ವಿರೋಧ ಇದೆ. ಇಷ್ಟೆಲ್ಲ ವಿರೋಧವಿದ್ದರೂ ಜಾರಿ ಮಾಡುತ್ತೇವೆ ಅಂತಿದ್ದಾರೆ. ಮೊದಲು ವರದಿ ಬಹಿರಂಗಪಡಿಸಲಿ, ಸಾರ್ವಜನಿಕವಾಗಿ ಚರ್ಚೆಯಾಗಲಿ. ಸಿದ್ದರಾಮಯ್ಯನವರು ವರದಿಯಲ್ಲಿ ಏನಿದೆ ಅಂತ ನೋಡಿಲ್ಲ ಅಂತಿದ್ದಾರೆ, ಆದರೆ ವರದಿ ರೆಡಿ ಮಾಡಿಸಿದವರೇ ಅವರು'' ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ:ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್​; ಬೊಮ್ಮಾಯಿ ಪುತ್ರನಿಗೆ ಶಿಗ್ಗಾಂವಿ ಟಿಕೆಟ್​, ಚನ್ನಪಟ್ಟಣ ಅಭ್ಯರ್ಥಿ​ ಸಸ್ಪೆನ್ಸ್​

ಗೋಪಾಲ್ ಜೋಶಿ ಬಂಧನ ವಿಚಾರದ ಕುರಿತು ಪ್ರತಿಕ್ರಿಯಿಸಿ, ''ಪ್ರಲ್ಹಾದ್​ ಜೋಶಿಯವರು ಅವರ ಸಹೋದರನ ಜೊತೆ ಯಾವುದೇ ಸಂಬಂಧ ಇಟ್ಟುಕೊಂಡಿಲ್ಲ. ನನಗೆ ಅವರ ಕುಟುಂಬದ ಬಗ್ಗೆ ಚೆನ್ನಾಗಿ ಗೊತ್ತಿದೆ. ವೈಯಕ್ತಿಕ, ಆರ್ಥಿಕ ಸಂಬಂಧವೂ ಅವರಿಬ್ಬರ ನಡುವೆ ಇಲ್ಲ. ಕಾಂಗ್ರೆಸ್​ನವರು ಸೇಡಿನ‌ ರಾಜಕೀಯ ಮಾಡುತ್ತಿದ್ದಾರೆ. ಸೇಡಿಗಾಗಿ ಎಫ್ಐಆರ್ ಹಾಕಿಸುತ್ತಿದ್ದಾರೆ'' ಎಂದು ಆರೋಪಿಸಿದರು.

ಭರತ್ ಬೊಮ್ಮಾಯಿ ಹೇಳಿದ್ದೇನು?:ಶಿಗ್ಗಾಂವಿ ಅಭ್ಯರ್ಥಿ ಭರತ್ ಬೊಮ್ಮಾಯಿ ಮಾತನಾಡಿ, ''ನಮ್ಮ ಮೆಚ್ಚಿನ ನಾಯಕರಾದ ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ, ಉಸ್ತುವಾರಿ ರಾಧಾಮೋಹನ್​ ಅಗರವಾಲ್, ಸಂಸದೀಯ ಮಂಡಳಿ‌ ಸದಸ್ಯ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಅಶೋಕ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಶಿಗ್ಗಾಂವಿ ಜನರ ಹಾಗೂ ಸಮಾಜದ ಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ. ನನ್ನ ತಂದೆ-ತಾಯಿ ಆಶೀರ್ವಾದದಿಂದ ಈ ಅವಕಾಶ ಸಿಕ್ಕಿದೆ. ತಂದೆಯವರು ಶಿಗ್ಗಾಂವಿ ಸವಣೂರು ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಜನ ಬೆಂಬಲ ಪಡೆದಿದ್ದಾರೆ. ಅವರ ಎಲ್ಲ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ'' ಎಂದರು.

''ನಾವು ಟಿಕೆಟ್ ಕೇಳಿರಲಿಲ್ಲ, ವರಿಷ್ಠರು ಗುರುತಿಸಿ‌ ಕೊಟ್ಟಿದ್ದಾರೆ. ಕ್ಷೇತ್ರದ ಜನರ ಪರಿಚಯ ನನಗಿದೆ. ಅಲ್ಲಿನ‌ ಮನೆ-ಮನೆಗಳಲ್ಲೂ ನಾನು ಗುರುತಿಸಿಕೊಂಡಿದ್ದೇನೆ. ವರಿಷ್ಠರು ಎಲ್ಲವನ್ನೂ ನೋಡಿ ಈ ತೀರ್ಮಾನ ಮಾಡಿದ್ದಾರೆ. ಉಳಿದ ಆಕಾಂಕ್ಷಿಗಳು ಸಹ ನಮ್ಮ ಜೊತೆಗಿದ್ದಾರೆ. ಎಲ್ಲರ ಸಹಕಾರವಿದೆ. ನನಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ವರಿಷ್ಠರ ತೀರ್ಮಾನಕ್ಕೆ ಬದ್ಧವಾಗಿದ್ದೇನೆ. ನಾಳೆ ನಾನು ಶಿಗ್ಗಾಂವಿ ಕ್ಷೇತ್ರಕ್ಕೆ ಹೋಗಿ ಜನರನ್ನು ಭೇಟಿ ಮಾಡುತ್ತೇನೆ'' ಎಂದು ತಿಳಿಸಿದರು.

ಇದನ್ನೂ ಓದಿ:ಶಿಗ್ಗಾಂವ್ ಉಪಚುನಾವಣೆ ; ಬೊಮ್ಮಾಯಿ ಪುತ್ರನಿಗೆ ಟಿಕೆಟ್ - ಇಲ್ಲಿದೆ ಭರತ್ ಬೊಮ್ಮಾಯಿ ಕಿರುಪರಿಚಯ​

ABOUT THE AUTHOR

...view details