ಕರ್ನಾಟಕ

karnataka

ETV Bharat / state

ಪ್ರಾಮಾಣಿಕವಾಗಿ ಜನರ ಸೇವೆಯ ಸಂಕಲ್ಪ ಮಾಡುತ್ತೇನೆ: ಬಸವರಾಜ ಬೊಮ್ಮಾಯಿ - basavaraj bommai

ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿದ ಹಾವೇರಿ - ಗದಗ ಜನತೆಗೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೃದಯಪೂರ್ವಕ ಧನ್ಯವಾದ ಸಲ್ಲಿಸಿದರು.

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ (ETV Bharat)

By ETV Bharat Karnataka Team

Published : Jun 4, 2024, 4:16 PM IST

Updated : Jun 4, 2024, 4:26 PM IST

ಬಸವರಾಜ ಬೊಮ್ಮಾಯಿ (ETV Bharat)

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್​ನ ಆನಂದಸ್ವಾಮಿ ಗಡ್ಡದೇವರಮಠ ವಿರುದ್ಧ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.

ಈ ಫಲಿತಾಂಶದ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, ನಾನು ಹಾವೇರಿ - ಗದಗ ಮಹಾ ಜನತೆಗೆ ಹೃದಯಪೂರ್ವಕ ಧನ್ಯವಾದ, ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಮತದಾರರು ನನ್ನ ಮತ್ತು ಬಿಜೆಪಿ ಮೇಲೆ ನಂಬಿಕೆ ಇಟ್ಟು, ಜೊತೆಗೆ ನರೇಂದ್ರ ಮೋದಿಯವರ ಮೇಲೆ ವಿಶ್ವಾಸವಿಟ್ಟು ಗೆಲುವು ತಂದುಕೊಟ್ಟಿದ್ದಾರೆ. ಅವರ ನಿರೀಕ್ಷೆಯಂತೆ ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿಯವರು ಪ್ರಧಾನಿಮಂತ್ರಿಯಾಗುತ್ತಾರೆ. ಇಲ್ಲಿ ನಾನು ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುವ ಸಂಕಲ್ಪ ಮಾಡುತ್ತೇನೆ ಎಂದು ಹೇಳಿದರು.

ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ:ಮತ್ತೊಂದೆಡೆ, ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸಿದ ಹಿನ್ನೆಲೆ ಹಾವೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಹಾವೇರಿ ವಾಲ್ಮೀಕಿ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ತೆರೆದ ವಾಹನದಲ್ಲಿ ಅದ್ಧೂರಿ ರೋಡ್ ಶೋ ನಡೆಸಿದರು. ಬಣ್ಣ ಹಾಕಿ, ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು.

ಮೊದಲ ಬಾರಿಗೆ ಬೊಮ್ಮಾಯಿ ಲೋಕಸಭೆಗೆ ಪ್ರವೇಶ: ಇನ್ನು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಜಯಭೇರಿ ಬಾರಿಸಿರುವ ಬೊಮ್ಮಾಯಿ, ಇದೇ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿ ವಿಜಯ ಪತಾಕೆ ಹಾರಿಸಿದ್ದಾರೆ.

ಬಿಜೆಪಿ ಭದ್ರಕೋಟೆ: 2008ರಲ್ಲಿ ನಡೆದ ಕ್ಷೇತ್ರ ಮರುವಿಂಗಡಣೆಯ ಪ್ರಕ್ರಿಯೆಯ ಫಲವಾಗಿ ಸೃಷ್ಟಿಯಾದ ಹೊಸ ಕ್ಷೇತ್ರ. ಅದರ ಮರುವರ್ಷವೇ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಮೊದಲು ಜಯ ಗಳಿಸಿದ್ದು ಶಿವಕುಮಾರ್ ಚನ್ನಬಸಪ್ಪ ಉದಾಸಿ. ಆಗಿನಿಂದಲೂ ಇದು ಬಿಜೆಪಿಯ ಭದ್ರಕೋಟೆಯೇ ಆಗಿದೆ. 2014ರಲ್ಲಿ ಹಾಗೂ 2019ರ ಚುನಾವಣೆಗಳಲ್ಲಿ ಪುನಃ ಉದಾಸಿಯವರೇ ಗೆದ್ದು ಬಂದಿದ್ದರು. ಈ ಬಾರಿ ಬಿಜೆಪಿಯು ಈ ಕ್ಷೇತ್ರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಿತ್ತು. ನಿರೀಕ್ಷೆಯಂತೆ ಇಲ್ಲಿ ಬೊಮ್ಮಾಯಿ ಗೆಲುವಿನ ನಗೆ ಬೀರಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ.76.78 ಮತದಾನ ದಾಖಲಾಗಿತ್ತು.

ಈ ಬಾರಿಯ ಲೋಕಸಭಾ ಚುನಾವಣೆಗೂ ಮುನ್ನ ಹಾವೇರಿ-ಗದಗ ಕ್ಷೇತ್ರದ ಮೇಲೆ ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ಕಣ್ಣಿಟ್ಟಿದ್ದರು. ತಮ್ಮ ಪುತ್ರ ಕೆ ಎಸ್ ಕಾಂತೇಶ್​ಗೆ ಟಿಕೆಟ್​ ಸಿಗುತ್ತೆ ಎಂಬ ನಿರೀಕ್ಷೆಯಿಂದ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ್ದರು. ಆದ್ರೆ ಅಂತಿಮವಾಗಿ ಪಕ್ಷದ ಹೈಕಮಾಂಡ್​ ಬೊಮ್ಮಾಯಿ ಅವರಿಗೆ ಮಣೆ ಹಾಕಿತ್ತು. ​

ಇದನ್ನೂ ಓದಿ:4ನೇ ಬಾರಿ ಮಲೆನಾಡಲ್ಲಿ ಅರಳಿದ ಕಮಲ: ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರಗೆ ಸತತ ಗೆಲುವು - BY RAGHAVENDRA WON

Last Updated : Jun 4, 2024, 4:26 PM IST

ABOUT THE AUTHOR

...view details