ಹುಬ್ಬಳ್ಳಿ: ಧಾರವಾಡ ಕ್ಷೇತ್ರಕ್ಕೆ ಹೊಂದಿಕೊಂಡೇ ಇರುವ ಬೆಳಗಾವಿ ಮತ್ತು ಹಾವೇರಿ-ಗದಗ ಕ್ಷೇತ್ರಗಳು ಸಹಜವಾಗಿಯೇ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಸ್ಪರ್ಧೆಯಿಂದ ಈ ಬಾರಿ ರಾಷ್ಟ್ರದ ಗಮನ ಸೆಳೆದಿದ್ದವು. ಇಬ್ಬರೂ ಲೋಕ ಸಮರದ ಮೊದಲ ಯತ್ನದಲ್ಲೇ ಯಶಸ್ವಿಯಾಗಿ ಇದೀಗ ದೆಹಲಿ ವಿಮಾನ ಹತ್ತಿದ್ದಾರೆ. ಇಬ್ಬರೂ ಹುಬ್ಬಳ್ಳಿ ಮೂಲದವರು ಎಂಬುದು ಅಷ್ಟೇ ಅಲ್ಲದೇ 1994ರಲ್ಲಿ ಚೊಚ್ಚಲ ಚುನಾವಣೆಯಲ್ಲಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಲ್ಲೂ ಪರಸ್ಪರ ಮುಖಾಮುಖಿಯಾದವರು ಎಂಬುದು ವಿಶೇಷ.
ಸರಳ, ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಳ್ಳುವ ಜಗದೀಶ್ ಶೆಟ್ಟರ್ ಮರಳಿ ಕೇಸರಿ ಗೂಡಿಗೆ ಬಂದ ನಂತರ ತೀವ್ರ ಪ್ರಯಾಸಪಟ್ಟು ಬೆಳಗಾವಿ ಕ್ಷೇತ್ರದ ಟಿಕೆಟ್ ಗಿಟ್ಟಿಸಿಕೊಂಡರು. ಅಂತಿಮವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಗ ಮೃಣಾಲ್ ಹೆಬ್ಬಾಳ್ಕರ್ ಎದುರು ಸುಮಾರು ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ದಿ.ಸುರೇಶ್ ಅಂಗಡಿ ಅವರ ಭದ್ರ ನೆಲೆಯಲ್ಲಿ ಮಂಗಳಾ ಅಂಗಡಿ ಅನುಕಂಪದ ಅಲೆಯಲ್ಲಿ ಉಪಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಆದ್ರೆ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆಗಳಾದವು. ಹುಬ್ಬಳ್ಳಿ ರಾಜಕೀಯದಲ್ಲಿ ಹೆಸರು ಮಾಡಿದ್ದ ಜಗದೀಶ್ ಶೆಟ್ಟರ್‌ಗೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರ ಹೈಕಮಾಂಡ್ ಟಿಕೆಟ್ ನೀಡಲಿಲ್ಲ. ಆಗ ಬಿಜೆಪಿ ವಿರುದ್ದ ಬಂಡೆದ್ದು ಕಾಂಗ್ರೆಸ್ ಸೇರಿ ಸೋಲು ಕಂಡು, ಪರಿಷತ್ ಸ್ಥಾನ ಗಿಟ್ಟಿಸಿಕೊಂಡಿದ್ದರು. ಅಷ್ಟಕ್ಕೆ ಶೆಟ್ಟರ್ ರಾಜಕೀಯ ಅಂತ್ಯವಾಯಿತು ಎಂದು ವಿರೋಧಿಗಳು ಕುಹಕವಾಡಿದ್ದರು.
ಆ ಬಳಿಕ ಮತ್ತೆ ಬಿಜೆಪಿಗೆ ಮರು ಸೇರ್ಪಡೆಗೊಂಡು ಕುಹಕವಾಡಿದವರಿಗೆ ಶಾಕ್ ನೀಡಿದರು. ಅದಲ್ಲದೇ ಧಾರವಾಡ ಲೋಕಸಭೆ ಟಿಕೆಟ್ಗೆ ಪ್ರಯತ್ನಪಟ್ಟರು. ಕೊನೆ ಗಳಿಗೆಯಲ್ಲಿ ಬೆಳಗಾವಿಗೆ ಟಿಕೆಟ್ ರಾತ್ರೋರಾತ್ರಿ ಘೋಷಣೆಯಾಗಿತ್ತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಶೆಟ್ಟರ್ ಅಮೋಘ ಜಯ ಸಾಧಿಸಿ, ರಾಜಕೀಯ ಮರುಜೀವ ಪಡೆಯುವುದರ ಜೊತೆಗೆ ದೆಹಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇನ್ನೊಂದೆಡೆ, ಹಾವೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೆಲುವಿನ ಏಲಕ್ಕಿ ಹಾರ ಧರಿಸಿದ್ದಾರೆ. ಕಾಂಗ್ರೆಸ್ ಹುರಿಯಾಳು ಆನಂದ ಗಡ್ಡದೇವರಮಠ ವಿರುದ್ಧ 41,998 ಅಂತರದ ಗೆಲುವು ದಾಖಲಿಸಿ, ಚುನಾವಣಾ ತಂತ್ರಗಾರಿಕೆಗೆ ತನಗೆ ಸಾಟಿಯಿಲ್ಲ ಎಂಬುದನ್ನು ತೋರಿಸಿದ್ದಾರೆ.