ದೇವನಹಳ್ಳಿ: ಅಂಡರ್ ವೇರ್ನಲ್ಲಿ ಮರೆಮಾಚಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು, ಆರೋಪಿಯಿಂದ 55 ಲಕ್ಷ ಮೌಲ್ಯದ 799.37 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಏಪ್ರಿಲ್ 25 ರಂದು ಸಿಂಗಾಪುರದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಇಂಡಿಗೋ ವಿಮಾನ ಸಂಖ್ಯೆ 6E 1006ರ ಪ್ರಯಾಣಿಕನನ್ನು ಖಚಿತ ಮಾಹಿತಿ ಮೇರೆಗೆ ವಿಚಾರಣೆ ನಡೆಸಿ ತಪಾಸಣೆ ನಡೆಸಿದ್ದಾಗ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ, ಭಾರತೀಯ ಮೂಲದ ಪ್ರಯಾಣಿಕನಾಗಿದ್ದು, ಆತ ತನ್ನ ಒಳ ಉಡುಪಿನಲ್ಲಿ ಪೇಸ್ಟ್ ರೂಪದದಲ್ಲಿ ಚಿನ್ನವನ್ನು ಮರೆಮಾಚಿ ಸಾಗಣೆ ಮಾಡುತ್ತಿದ್ದ.
ಇದೇ ವಿಮಾನ ನಿಲ್ದಾಣದಲ್ಲಿ ಕೆಲ ದಿನಗಳ ಹಿಂದಷ್ಟೇ ಜೀನ್ಸ್ ಪ್ಯಾಂಟ್ನಲ್ಲಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡಲೆತ್ನಿಸಿದ್ದ ಪ್ರಯಾಣಿಕನೊಬ್ಬ ಸಿಕ್ಕಿಬಿದ್ದಿದ್ದ. ಯಾರಿಗೂ ತಿಳಿಯಬಾರದು ಎಂದು ಪ್ಯಾಂಟ್ ಬಾಟಮ್ ಅನ್ನು ವಿಭಿನ್ನವಾಗಿ ವಿನ್ಯಾಸ ಮಾಡಿ ಅದರೊಳಗೆ ಚಿನ್ನವನ್ನು ಮರೆಮಾಚಿ ಸಾಗಿಸಲು ಯತ್ನಿಸಿದ್ದ. ಆರೋಪಿಯಿಂದ 22.58 ಲಕ್ಷ ಮೌಲ್ಯದ 367 ಗ್ರಾಂ ಬಂಗಾರವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.