ಬೆಂಗಳೂರು:ನಗರದ ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿ ಒಟ್ಟು 200 ಸ್ವತ್ತುಗಳ ಖಾತಾಗಳಿಗೆ ಸಂಬಂಧಿಸಿದಂತೆ ನಕಲಿ ಎ ಖಾತಾಗಳನ್ನು ಮಾಡಿಕೊಡುವ ಮೂಲಕ ಬಿಬಿಎಂಪಿಗೆ ಐದು ಕೋಟಿ ರೂಪಾಯಿಗಿಂತ ಹೆಚ್ಚು ನಷ್ಟವನ್ನುಂಟು ಮಾಡಲಾಗಿದೆ. ಇದರಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರವೆಸಗಿದ್ದು, ತಪ್ಪಿತಸ್ಥ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆಗ್ರಹಿಸಿದರು.
ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ದಾಖಲೆ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಒಂದೇ ತಿಂಗಳ ಅವಧಿಯಲ್ಲಿ ನೂರಾರು ಸ್ವತ್ತುಗಳಿಗೆ ನಕಲಿ ಖಾತೆಗಳನ್ನು ಮಾಡುವ ಮೂಲಕ ಐದು ಕೋಟಿ ರೂಪಾಯಿಗಳಷ್ಟು ಪಾಲಿಕೆಗೆ ವಂಚಿಸಿರುವ ಅಧಿಕಾರಿಗಳು ಮತ್ತು ಸಂಸ್ಥೆಯೊಂದರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
200 ಸ್ವತ್ತುಗಳಿಗೆ ಎ ಖಾತಾ: ''ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಉಪವಿಭಾಗದ ವ್ಯಾಪ್ತಿ ಒಟ್ಟು 200 ಸ್ವತ್ತುಗಳ ಖಾತಾಗಳಿಗೆ ಸಂಬಂಧಿಸಿದಂತೆ ನಕಲಿ `ಎ' ಖಾತಾಗಳನ್ನು ಮಾಡಿಕೊಡುವದರಲ್ಲಿ ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಈ ಪ್ರಕರಣದಲ್ಲಿ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಡಾ. ಬಸವರಾಜ ಮಗ್ಗಿ, ಕೆಂಗೇರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ದೇವರಾಜು, ರಾಜರಾಜೇಶ್ವರಿನಗರ ವಲಯದ ಉಪ ಆಯುಕ್ತ ಅಬ್ದುಲ್ ರಬ್, ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತ ವಿ ಅಜಯ್ ಮತ್ತು ಮಿರು ಇನ್ಫೋ ಸೆಲ್ಯೂಷನ್ ಎಂಬ ಸಂಸ್ಥೆಯ ಮುಖ್ಯಸ್ಥರು ಭಾಗಿಯಾಗಿದ್ದಾರೆ'' ಎಂದು ದಾಖಲೆ ಸಹಿತ ಆರೋಪಿಸಿದರು.