ಕರ್ನಾಟಕ

karnataka

ETV Bharat / state

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ: ಮೈಸೂರಲ್ಲಿ 6 ದಿನ ಸಾಂಸ್ಕೃತಿಕ ಹಬ್ಬ, ರಂಗಾಯಣ ನಿರ್ದೇಶಕರ ಸಂದರ್ಶನ - BAHUROOPI NATIONAL THEATRE FESTIVAL

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮಗಳ ಕುರಿತು ಮೈಸೂರು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಅವರು ವಿವರವಾಗಿ 'ಈಟಿವಿ ಭಾರತ' ಜೊತೆ ಮಾತನಾಡಿದ್ದಾರೆ.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ (ETV Bharat)

By ETV Bharat Karnataka Team

Published : 18 hours ago

ಮೈಸೂರು: ಸಾಮಾಜಿಕ ನ್ಯಾಯ, ಚಳವಳಿಗಳು ಮತ್ತು ರಂಗಭೂಮಿ ಎಂಬ ಆಶಯ ಶೀರ್ಷಿಕೆಯಡಿ ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಜನವರಿ 14 ರಿಂದ 19ರ ವರೆಗೆ ಆಯೋಜಿಸಲಾಗಿದೆ.

ರಂಗಾಯಣದಲ್ಲಿ ವಿವಿಧ ಕಾರ್ಯಕ್ರಮಗಳ ರಸದೌತಣ :ಆರು ದಿನಗಳ ಕಾಲ ನಡೆಯುವ ಈ ಬಹುರೂಪಿ ನಾಟಕೋತ್ಸವದಲ್ಲಿ ವಿವಿಧ ಭಾಷೆಯ ಹಲವು ನಾಟಕಗಳ ಪ್ರರ್ದಶನ ಸೇರಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.

ವಿವಿಧ ಜಿಲ್ಲೆಗಳ ಜಾನಪದ ಕಲಾ ತಂಡಗಳು ಕಿಂದರಜೋಗಿ ವೇದಿಕೆಯಲ್ಲಿ ಪ್ರದರ್ಶನ ನೀಡಲಿವೆ. ಜನವರಿ 18 ಹಾಗೂ 19ರಂದು ಎರಡು ದಿನಗಳ ಕಾಲ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ನಾಡಿನ ಹೆಸರಾಂತ ವಿದ್ವಾಂಸರು ಈ ವಿಚಾರ ಸಂಕಿರಣದಲ್ಲಿ ವಿಚಾರ ಮಂಡನೆ ಮಾಡಲಿದ್ದಾರೆ. ಶ್ರೀರಂಗ ರಂಗಮಂದಿರದಲ್ಲಿ ರಾಷ್ಟ್ರೀಯ ಚಲನಚಿತ್ರೋತ್ಸವ, ರಂಗಾಯಣದ ಆವರಣದಲ್ಲಿ ಪುಸ್ತಕ ಮೇಳ, ಕರಕುಶಲ ಮೇಳ, ಚಿತ್ರಕಲಾ ಪ್ರದರ್ಶನ ಹಾಗೂ ಲಂಕೇಶ್ ಕಲಾ ಗ್ಯಾಲರಿಯಲ್ಲಿ ಮೈಸೂರು ಶೈಲಿಯ ಪೈಂಟಿಂಗ್ಸ್, ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ವಾಸ್ತವಿಕ ಚಿತ್ರಕಲಾ ಕೃತಿಗಳ ಪ್ರದರ್ಶನ ನಡೆಯಲಿದೆ.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ (ETV Bharat)

ಕನ್ನಡ ಸೇರಿದಂತೆ ವಿವಿಧ ಭಾಷಗಳ 22 ನಾಟಕಗಳ ಪ್ರದರ್ಶನ :ಈ ಬಹುರೂಪಿ ನಾಟಕೋತ್ಸವದಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಇಂಗ್ಲಿಷ್ ಸೇರಿದಂತೆ ಒಟ್ಟು 22 ನಾಟಕಗಳ ಪ್ರದರ್ಶನ ಇದೆ. ಇದರಲ್ಲಿ 13 ಕನ್ನಡ, 2 ಇಂಗ್ಲಿಷ್ ಭಾಷೆ ನಾಟಕಗಳಿದ್ದು, ಭೂಮಿಗೀತ, ವನರಂಗ, ಕಿರುರಂಗಮಂದಿರ ಹಾಗೂ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ. ಇದರ ಜೊತೆಗೆ ಒಂದು ಯಕ್ಷಗಾನ ಪ್ರದರ್ಶನವೂ ಇರಲಿದೆ.

ಮೊದಲ ಬಾರಿಗೆ ಮಕ್ಕಳ ಬಹುರೂಪಿ ಕಾರ್ಯಕ್ರಮ :ಇದೇ ಮೊದಲ ಬಾರಿಗೆ ಬಹುರೂಪಿಯಲ್ಲಿ "ಮಕ್ಕಳ ಬಹುರೂಪಿ" ಆಯೋಜಿಸಲಾಗಿದ್ದು, ಕಲಾಮಂದಿದಲ್ಲಿ ಜ.15ರಂದು ಸಂಜೆ 6ಕ್ಕೆ ಬಹುಭಾಷ ನಟ ಪ್ರಕಾಶ್ ರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದರಲ್ಲಿ ಮಕ್ಕಳಿಗೆ ಸಂಬಂಧಿಸಿದ 6 ನಾಟಕ ಮತ್ತು 9 ಚಲನಚಿತ್ರಗಳು ಪ್ರದರ್ಶನ ಕಾಣಲಿವೆ. ಜ.18 ರಂದು ದ ಬಾಯ್, ದ ಮೋಲ್, ದ ಫಾಕ್ಸ್ ಆ್ಯಂಡ್ ದ ಹಾರ್ಸ್, ಕವಿ, ಸ್ಪಿರಿಟ್ ಚಿತ್ರಗಳು ಪ್ರದರ್ಶನ‌ ಕಾಣಲಿವೆ ಮತ್ತು 19 ರಂದು ದ ಸೈಲೆಂಟ್ ಚೈಲ್ಡ್, ಕ್ಲಾಸ್ ಡಿವೈಡ್ ಸಿನಿಮಾಗಳನ್ನು ಮಕ್ಕಳಿಗಾಗಿ ಆಯೋಜನೆ ಮಾಡಲಾಗಿದೆ. ಇದಕ್ಕೆ ಮಕ್ಕಳಿಗೆ ‍50 ರೂಪಾಯಿ ದರ ನಿಗದಿ ಪಡಿಸಲಾಗಿದೆ.

ರಂಗಾಯಣ ನಿದೇರ್ಶಕರು ಹೇಳಿದ್ದೇನು?ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ರಾಷ್ಟ್ರೀಯ ಚಲನಚಿತ್ರೋತ್ಸವ ಆರು ದಿನಗಳ ಕಾಲ ನಡೆಯಲಿದೆ ಹಾಗೂ ಪ್ರತಿದಿನ ಸಂಜೆ‌ 5.30 ರಿಂದ 6.30ಕ್ಕೆ ಕಿಂದರಜೋಗಿ‌ ಆವರಣದಲ್ಲಿ ಜನಪದ ಉತ್ಸವ ಕೂಡಾ ನಡೆಯಲಿದೆ. ಜನವರಿ 13 ರಂದು‌ ಪೂಜಾ ಕುಣಿತದ ಕಲಾವಿದೆ ಸವಿತಾ ಚೀಕುಕುನ್ನಯ್ಯ ಉದ್ಘಾಟನೆ ಮಾಡಲಿದ್ದಾರೆ.

ಈ ಬಾರಿ ವಿಶೇಷವಾಗಿ "ಮಕ್ಕಳ ಬಹುರೂಪಿ" ಆಯೋಜಿಸಲಾಗಿದ್ದು, ಕಲಾಮಂದಿರ‌ ವೇದಿಕೆ ‌ಮಕ್ಕಳಿಗಾಗಿ ರೂಪುಗೂಳ್ಳುತ್ತಿದೆ. ಇದರಲ್ಲಿ ಮಕ್ಕಳಿಗೆ ಸಂಬಂಧಿಸಿದ ನಾಟಕಗಳು ಪ್ರದರ್ಶನ‌ವಾಗುತ್ತವೆ. ಜೊತೆಗೆ ಮಕ್ಕಳಿಗೆ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ನಾಟಕ ಹೊರತುಪಡಿಸಿ ಮಕ್ಕಳಿಗೆ ರಂಗಾಯಣದ ಆವರಣದಲ್ಲಿ ಪುಸ್ತಕ ಮೇಳ, ಕರಕುಶಲ ಮೇಳ, ಚಿತ್ರಕಲಾ ಉಚಿತ ಪ್ರದರ್ಶನ ಕೂಡಾ ಇರಲಿದೆ‌. ಜನವರಿ 14ರಂದು ಬೆಳಗ್ಗೆ ಭೂಮಿಗೀತದ ಆವರಣದಲ್ಲಿ ಸಚಿವ ಹೆಚ್.ಸಿ‌ ಮಹದೇವಪ್ಪ ಅವರು ಚಲನಚಿತ್ರೋತ್ಸವ ಉದ್ಘಾಟಿಸಲಿದ್ದು, ಅತಿಥಿಯಾಗಿ ನಟಿ ಭಾವನಾ ರಾಮಣ್ಣ ಭಾಗವಹಿಸಲಿದ್ದಾರೆ.

ಜ.14ರ ಸಂಜೆ ಒಟ್ಟು ಬಹರೂಪಿ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿಕೊಡಲು ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದೇವೆ. ಇನ್ನು ವನರಂಗದಲ್ಲಿ ಆರು ದಿನದ ರಂಗೋತ್ಸವವನ್ನು ಚಲನಚಿತ್ರ ನಟ ಹಾಗೂ ರಂಗಕರ್ಮಿ ಅತುಲ್ ಕುಲಕರ್ಣಿ ಉದ್ಘಾಟಿಸಲಿದ್ದಾರೆ. ಬಳಿಕ ಕಲ್ಯಾಣ ಕರ್ನಾಟಕದ‌ ಬಂದೇ ನವಾಜ್ ಬ್ರದರ್ಸ್ ನಡೆಸಿಕೊಡುವ ಸೂಫಿ ಕವಾಲಿ ಸಂಗೀತ ಕಾರ್ಯಕ್ರಮ ಇರಲಿದೆ. ನಂತರ ಜನವರಿ 15ರಂದು ಮಕ್ಕಳ ಬಹುರೂಪಿ ಆಯೋಜಿಸಲಾಗಿದ್ದು, ಕಲಾಮಂದಿರದಲ್ಲಿ ಜನವರಿ 15ರಂದು ಸಂಜೆ 6 ಗಂಟೆಗೆ ಚಲನಚಿತ್ರ ನಟ ಪ್ರಕಾಶ್ ರಾಜ್ ಉದ್ಘಾಟಿಸಲಿದ್ದಾರೆ. ಇಲ್ಲಿ‌ ಪ್ರದರ್ಶನವಾಗುವ ಎಲ್ಲ ನಾಟಕಗಳಿಗೆ ವಯಸ್ಕರಿಗೆ 100 ರೂಪಾಯಿ ಟಿಕೆಟ್ ಮತ್ತು ಮಕ್ಕಳಿಗೆ 50 ರೂಪಾಯಿ ಟಿಕೆಟ್ ನಿಗದಿ ಪಡಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ರಂಗಾಯಣ ‌ಹುಟ್ಟಿದ ದಿನ ಜನವರಿ 14 ರಂದೇ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಮಾಹಿತಿ ನೀಡಿದ್ದರು.

ಇದನ್ನೂ ಓದಿ:ಮೈಸೂರಿನಲ್ಲಿ ರೈಲ್ವೆ ರಕ್ಷಣಾ ಪಡೆ ತರಬೇತಿ ಕೇಂದ್ರ ಸ್ಥಾಪನೆ ; ಹೆಚ್​ಡಿಕೆ ಮನವಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಸ್ತು

ABOUT THE AUTHOR

...view details