ಶಿವಮೊಗ್ಗ : ಬಡವರ ಮೇಲೆ ಬರೆ ಎಳೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. 15 ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿಗಳಿಗೆ ರಾಜ್ಯದ ಅಭಿವೃದ್ಧಿ ಹಾಗೂ ಗ್ಯಾರಂಟಿಗೆ ಹಣ ಕ್ರೋಡೀಕರಿಸಲು ಆಗುತ್ತಿಲ್ಲ. ಹಾಗಾಗಿ, ಬಡವರ ಮೇಲೆ ಬರೆ ಎಳೆದು ಗದಾ ಪ್ರಹಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಆರೋಪಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಕಡೆ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣ ಇಲ್ಲ, ಬಿಪಿಎಲ್ ಕಾರ್ಡ್ ಕಟ್ ಮಾಡುತ್ತಿದ್ದಾರೆ. ಗ್ಯಾರಂಟಿಗಳಿಗೆ ಹಣ ಕ್ರೋಢೀಕರಿಸಲು ಈ ರೀತಿಯ ವಿಚಾರಗಳಿಗೆ ಕೈ ಹಾಕುತ್ತಿದ್ದಾರೆ. ಸರ್ಕಾರವನ್ನು ಬಡವರು ಕ್ಷಮಿಸುವುದಿಲ್ಲ ಎಂದು ಹೇಳಿದರು.
ಗ್ಯಾರಂಟಿಗೆ ಹಣ ಕ್ರೋಢೀಕರಿಸಲು ಬಿಪಿಎಲ್ ಕಾರ್ಡ್ ಕಟ್ : ಬಿವೈ ವಿಜಯೇಂದ್ರ (ETV Bharat) ವಕ್ಫ್ ವಿಚಾರದಲ್ಲೂ ಸಹ ನೀವು ನೋಡುತ್ತಿದ್ದೀರಿ. ರಾಜ್ಯದಲ್ಲಿ ಹಿಂದೂಗಳ ಭಾವನೆ ಕೆರಳಿಸಿದ್ದು, ಇನ್ನೊಂದು ಕಡೆ ರೈತರ ಜಮೀನು ಕಿತ್ತು ಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಬಿಜೆಪಿ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದೇ 21ನೇ ತಾರೀಖು ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯಾದ್ಯಂತ ಮೂರು ತಂಡಗಳಲ್ಲಿ ಪ್ರವಾಸ ಮಾಡುತ್ತಿದ್ದೇವೆ. ವಾಸ್ತವಿಕ ಸತ್ಯ ಮರೆಮಾಚುವ ಕೆಲಸ ಪ್ರಿಯಾಂಕ ಖರ್ಗೆ ಅವರು ಮಾಡುತ್ತಿದ್ದಾರೆ. ಸತ್ಯ ಏನು ಎಂದರೆ ಕಾಂಗ್ರೆಸ್ ಪಕ್ಷದಲ್ಲಿ ಕುದುರೆ ವ್ಯಾಪಾರ ಶುರುವಾಗಿದೆ. ಎಷ್ಟು ಶಾಸಕರನ್ನು ದುಡ್ಡು ಕೊಟ್ಟು ಖರೀದಿ ಮಾಡಬಹುದು ಅಂತ ಕಾಂಗ್ರೆಸ್ನಲ್ಲಿ ಪೈಪೋಟಿ ಶುರುವಾಗಿದೆ ಎಂದು ಹೇಳಿದರು.
ಗೊಂದಲ ಇರೋದು ಕಾಂಗ್ರೆಸ್ ಪಕ್ಷದಲ್ಲಿ, ನಮ್ಮ ಪಕ್ಷದಲ್ಲಿ ಅಲ್ಲ. 50 ಕೋಟಿ ಕೊಡುತ್ತಾರೋ 100 ಕೋಟಿ ಕೊಡ್ತಾರೋ ಆ ಪಕ್ಷದಲ್ಲಿ ಇರುವ ಘಟಾನುಘಟಿಗಳಿಗೆ ಬಿಟ್ಟಿದ್ದು, ಬಿಜೆಪಿಗೂ ಇದಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ತಿಳಿಸಿದರು.
ಮುಡಾ ಹಗರಣದ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕು :ಮುಡಾ ಹಗರಣದ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕು. ಮುಖ್ಯಮಂತ್ರಿಗಳ ಹಾಗೂ ಸರ್ಕಾರದ ಹಣೆಬರಹ ರಾಜ್ಯದ ಜನರಿಗೆ ಗೊತ್ತಾಗಿದೆ. ಮೂರು ತಂಡಗಳಲ್ಲಿ ಯಾರಿದ್ದಾರೆ ಎಂಬುದನ್ನು ನಾವು ಬಹಿರಂಗಪಡಿಸಿದ್ದೇವೆ. ರೈತರ ಪರವಾಗಿ ಯಾರು ಬೇಕಾದರೂ ಹೋರಾಟ ಮಾಡಬಹುದು. ಬಿಜೆಪಿ ಮೂರು ತಂಡಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರ ಜೊತೆಗೆ ನಾವಿದ್ದೇವೆ ಎಂದು ಹೇಳುತ್ತೇವೆ. ರೈತರ ಭೂಮಿಯನ್ನು ವಕ್ಫ್ ಕಿತ್ತುಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದರು.
ಬಿಜೆಪಿಯ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ : ಉಪಚುನಾವಣೆ ನಡೆದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ. ಚುನಾವಣಾ ಫಲಿತಾಂಶ ನವೆಂಬರ್ 23ಕ್ಕೆ ಘೋಷಣೆಯಾಗುತ್ತದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಸಂಡೂರು ಹಾಗೂ ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದಿದ್ದಾರೆ.
ಕಾಂಗ್ರೆಸ್ನಲ್ಲಿ ಪೈಪೋಟಿ ಶುರುವಾಗಿದೆ :ರವಿಗಾಣಿಗಾ ಏನ್ ಹೇಳಿದ್ದಾರೆ ಅನ್ನೋದಕ್ಕಿಂತ ಸ್ವತಃ ಜವಾಬ್ದಾರಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳೇ ಶಾಸಕರನ್ನು ಖರೀದಿಸುತ್ತಿದ್ದಾರೆ ಎಂದಿದ್ದಾರೆ. ನಾನು ಅವತ್ತು ಕೂಡ ಹೇಳಿದ್ದೇನೆ, ಬಿಜೆಪಿ ಆಪರೇಶನ್ ಮಾಡುತ್ತಿಲ್ಲ, ಕಾಂಗ್ರೆಸ್ನಲ್ಲಿ ಅಸಮಾಧಾನ ಕುದಿಯುತ್ತಿದೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ, ಸಿದ್ದರಾಮಯ್ಯನವರು ನಾವು ಮುಖ್ಯಮಂತ್ರಿ ಆಗಬೇಕು ಅಂತ ಹೇಳಿ ಕಾಂಗ್ರೆಸ್ನಲ್ಲಿ ಪೈಪೋಟಿ ಶುರುವಾಗಿದೆ. ಆ ಪೈಪೋಟಿಯ ಪರಿಣಾಮವಾಗಿ ಕಾಂಗ್ರೆಸ್ನಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ. ಬಿಜೆಪಿಗೆ ಇದರಲ್ಲಿ ಆಸಕ್ತಿ ಸಹ ಇಲ್ಲ, ವಿರೋಧ ಪಕ್ಷದಲ್ಲಿ ಜನ ಕೂರಿಸಿದ್ದಾರೆ. ವಿರೋಧ ಪಕ್ಷವಾಗಿ ನಾವು ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ :ನೈತಿಕ ಮಾರ್ಗದಲ್ಲಿ ಎಂದೂ ಅಧಿಕಾರ ಹಿಡಿಯದ ಕಾಂಗ್ರೆಸ್ಸಿಗರು: ಬಿ ವೈ ವಿಜಯೇಂದ್ರ