ಶಿವಮೊಗ್ಗ: ಇಡೀ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಪರವಾದ ಅಲೆ ಇದೆ. ಹಾಗಾಗಿ ಕಾಂಗ್ರೆಸ್ನವರು ಅಭ್ಯರ್ಥಿಗಳನ್ನು ಹಾಕುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಚುನಾವಣಾ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅವರು ಇಂದು ಶಿವಮೊಗ್ಗಕ್ಕೆ ಆಗಮಿಸಿ ಪ್ರಚಾರ ನಡೆಸಲಿದ್ದಾರೆ. ಯಾವುದೋ ಭ್ರಮೆಯಲ್ಲಿದ್ದ ಕಾಂಗ್ರೆಸ್‌ನವರಿಗೆ ಮೋದಿ ಅಲೆ ಇರುವುದು ಈಗ ಅರಿವಾಗಿದೆ. ಹಾಗಾಗಿ ಅಭ್ಯರ್ಥಿಗಳ ಆಯ್ಕೆಗೆ ಚಿಂತಿಸುತ್ತಿದ್ದಾರೆ. ನಾವು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಿದ್ದೇವೆ ಎಂದರು.
ಪುತ್ರನಿಗೆ ಟಿಕೆಟ್ ಸಿಗದ ಕಾರಣಕ್ಕೆ ಕೆ.ಎಸ್.ಈಶ್ವರಪ್ಪ ಮುನಿಸಿನ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲವೂ ಸರಿಯಾಗುತ್ತದೆ. ಎಲ್ಲವನ್ನೂ ಸರಿಪಡಿಸುವ ಕೆಲಸವನ್ನು ಪಕ್ಷದ ವರಿಷ್ಠರು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಬಳಿಕ ಬಿಎಸ್ವೈ ಕುರಿತು ಈಶ್ವರಪ್ಪ ಹೇಳಿಕೆಗೆ, ಯಡಿಯೂರಪ್ಪನವರ ಕುಟುಂಬದ ಬಗ್ಗೆ ಮಾತನಾಡುವುದು ಅರ್ಥಹೀನ. ಇಂದು ರಾಜ್ಯದಲ್ಲಿ ಪಕ್ಷ ಸದೃಢವಾಗಿ ಬೆಳೆದು ನಿಂತಿದೆ ಎಂದರೆ ಅದರ ಹಿಂದೆ ಲಕ್ಷಾಂತರ ಕಾರ್ಯಕರ್ತರ ಶ್ರಮ, ಹಿರಿಯ ನಾಯಕರ ಅವಿರತ ಹೋರಾಟವಿದೆ. ಅಷ್ಟೇ ಅಲ್ಲದೇ, ಯಡಿಯೂರಪ್ಪನವರು ಸೈಕಲ್ನಲ್ಲೇ ರಾಜ್ಯಾದ್ಯಂತ ಸುತ್ತಾಡಿ ಪಕ್ಷ ಸಂಘಟನೆ ಮಾಡಿದ ಫಲವಾಗಿ ಬಿಜೆಪಿ ಬಲಿಷ್ಠವಾಗಿದೆ ಎಂದು ಹೇಳಿದರು.
ಮೋದಿಯವರು ಆಗಮಿಸುತ್ತಿರುವುದು ಪ್ರಜಾಪ್ರಭುತ್ವ ಹಬ್ಬದ ವಾತಾವರಣ ಉಂಟಾಗಿದೆ. ನಗರದ ಅಲ್ಲಮಪ್ರಭು ಮೈದಾನದಲ್ಲಿ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಒಂದುವರೆ ವರ್ಷದಲ್ಲಿ ಮೂರನೇ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಈ ಸಮಾವೇಶ ರಾಷ್ಟ್ರದ ಹಿತವನ್ನು ಹಿಡಿದುಕೊಂಡು ಭದ್ರ ಬುನಾದಿಯಾಗುತ್ತದೆ ಎಂದು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಈಶ್ವರಪ್ಪನವರ ಬಂಡಾಯ ಸ್ಪರ್ಧೆ ಕುರಿತು ನಿಮ್ಮ ಮುಂದಿನ ಪ್ರಶ್ನೆಗಳಿಗೆ ಅಮೇಲೆ ಉತ್ತರಿಸುತ್ತೇನೆ. ಈಶ್ವರಪ್ಪನವರು ಅವರು ನಮ್ಮ ಜೊತೆಯಲ್ಲಿ ಬರ್ತಾರೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದರು.
ಇಂದು ಶಿವಮೊಗ್ಗಕ್ಕೆ ಮೋದಿ:ಚುನಾವಣಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಆಯನೂರಿನಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಇಂದು ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಜಿಲ್ಲೆಗೆ ಆಗಮಿಸಲಿದ್ದು, ಅಲ್ಲಮಪ್ರಭು ಮೈದಾನದಲ್ಲಿ ಪ್ರಚಾರ ನಡೆಸಲಿದ್ದಾರೆ. ಶಿವಮೊಗ್ಗ, ಉಡುಪಿ-ಚಿಕ್ಕಮಗಳೂರು, ದಾವಣಗೆರೆ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸುಮಾರು 2 ಲಕ್ಷ ಜನ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದಕ್ಕೂ ಮುನ್ನ ಶಿವಮೊಗ್ಗ ನಗರಕ್ಕೆ ವಿಶೇಷ ವಿಮಾನದ ಮೂಲಕ ಮೋದಿ ಆಗಮಿಸುವರು. ಬಳಿಕ ಸುಮಾರು 14 ಕಿ.ಮೀ ದೂರ ಎಸ್ಪಿಜಿ ಭದ್ರತೆಯಲ್ಲಿ ಕಾರಿನಲ್ಲಿ ಸಂಚರಿಸಲಿದ್ದಾರೆ. ವಿಮಾನ ನಿಲ್ದಾಣದ ಎನ್.ಆರ್.ಪುರ ರಸ್ತೆಯಿಂದ ಶಿವಮೊಗ್ಗದ ಬಿ.ಹೆಚ್.ರಸ್ತೆ, ನೆಹರು ರಸ್ತೆ, ಬೈಪಾಸ್ ರಸ್ತೆ ಸರ್.ಎಂ.ವಿಶ್ವೇಶ್ವರಯ್ಯ ರಸ್ತೆ, ಸಂಗೊಳ್ಳಿ ರಾಯಣ್ಣ ರಸ್ತೆ ಸೇರಿದಂತೆ ಕೆಲೆ ರಸ್ತೆಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಇದನ್ನೂ ಓದಿ:ಇಂದು ಶಿವಮೊಗ್ಗಕ್ಕೆ ಪ್ರಧಾನಿ ಮೋದಿ; ಲೋಕಸಭಾ ಚುನಾವಣೆಗೆ ಮತಬೇಟೆ