ಶಿವಮೊಗ್ಗ: ಜನ ಕಾಂಗ್ರೆಸ್ನ ಗ್ಯಾರಂಟಿ ನೋಡಲ್ಲ, ಮೋದಿ ಗ್ಯಾರಂಟಿ ನೋಡಿ ಮತ ಹಾಕುತ್ತಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಜನ ಯಾವುದೇ ಗ್ಯಾರಂಟಿಯನ್ನು ನೋಡದೆ, ಮೋದಿ ಗ್ಯಾರಂಟಿ ನೋಡುತ್ತಿದ್ದಾರೆ. ಮೋದಿ ಗ್ಯಾರಂಟಿ ಅಂದ್ರೆ ಕೇವಲ ಅಕ್ಕಿ, ಬೇಳೆ ಅಲ್ಲ ದೇಶದ ರಕ್ಷಣೆ, ಇದರಿಂದ ಈ ಭಾರಿ ಜನ ಮೋದಿಗೆ ಬೆಂಬಲ ನೀಡುತ್ತಾರೆ ಎಂದರು.
ಕಾಂಗ್ರೆಸ್ ಪಕ್ಷದಿಂದ ಗ್ಯಾರಂಟಿಯಾಗಿ ಮಹಿಳೆಯರಿಗೆ 1 ಲಕ್ಷ ರೂ. ನೀಡಲಾಗುವುದು ಎಂದು ಹೇಳುತ್ತಿದ್ದಾರೆ. ಮತಕ್ಕಾಗಿ ಮತದಾರನ್ನು ತಪ್ಪುದಾರಿಗೆ ಹಿಂದೆಯೂ ಎಳೆಯೆಲಾಗಿತ್ತು, ಮುಂದೆಯೂ ಎಳೆಯಲಾಗುತ್ತಿದೆ. ನಮ್ಮ ದೇಶದಲ್ಲಿ 68 ಕೋಟಿ ಹೆಣ್ಣು ಮಕ್ಕಳಿದ್ದಾರೆ. ಅವರಿಗೆ 1 ಲಕ್ಷ ರೂ. ನೀಡಬೇಕಿದೆ. ಹಾಗಾದ್ರೆ 68 ಲಕ್ಷ ಕೋಟಿ ರೂ. ನೀಡಬೇಕಾಗುತ್ತದೆ. ನಮ್ಮ ದೇಶದ ಬಜೆಟ್ 45 ಲಕ್ಷ ಕೋಟಿ ರೂ. ಆಗಿದೆ. ಹಾಗಾದ್ರೆ ಹೆಚ್ಚುವರಿ ಹಣ ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದರು.
ಕಳೆದ ಒಂದು ವಾರದಿಂದ ಈ ಬಗ್ಗೆ ಚರ್ಚೆ ಪ್ರಾರಂಭವಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಈಗ ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಎಂದು ಹೇಳುತ್ತಿದ್ದಾರೆ. ಹಾಗಾದ್ರೆ, 38 ಕೋಟಿ ಹೆಣ್ಣು ಮಕ್ಕಳಿಗೆ 38 ಲಕ್ಷ ಕೋಟಿ ರೂ. ಬೇಕಾಗುತ್ತದೆ ಎಂದರು. ಜನ ಒಂದು ಸಲ ಮೋಸ ಹೋಗಬಹುದು, ಪದೇ ಪದೇ ಮೋಸ ಹೋಗಲ್ಲ, ಈ ಕುರಿತು ನಮ್ಮ ಮಹಿಳಾ ಮೋರ್ಚಾದ ಕಾರ್ಯಕರ್ತರು ಮನೆ ಮನೆಗೆ ಹೋಗಿ ಪ್ರಚಾರ ನಡೆಸಲಿದ್ದಾರೆ ಎಂದರು.