ಬಳ್ಳಾರಿ:ದೇಶದೆಲ್ಲೆಡೆ ಮೋದಿ ಅಲೆ ಇದೆ. ಬಿಜೆಪಿ ಈ ಬಾರಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದ್ದಾರೆ. ಬಳ್ಳಾರಿ ನಗರದಲ್ಲಿ ಮಂಗಳವಾರ ಬಿ. ಶ್ರೀರಾಮುಲು ಅವರು ನಡೆಸಿದ ಚುನಾವಣಾ ಪ್ರಚಾರ ಯಾತ್ರೆಯಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
‘ದೇಶದಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಮಂತ್ರಿಗಳನ್ನು ಚುನಾವಣೆಗೆ ನಿಲ್ಲಿಸಬೇಕು ಎಂದು ಆರಂಭದಲ್ಲಿ ಚರ್ಚೆಗಳಾದವು. ಕೊನೆಗೆ ಮಂತ್ರಿಗಳೆಲ್ಲ ಸ್ಪರ್ಧೆಗೆ ನಿರಾಕರಿಸಿದರು. ಈಗ ಅವರ ಮಕ್ಕಳು, ಮೊಮ್ಮಕ್ಕಳು, ಹೆಣ್ಮಕ್ಕಳು, ಕುಟುಂಬಸ್ಥರೇ ಚುನಾವಣೆಗೆ ನಿಂತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿಗಳಿಲ್ಲ. ದೇಶದೆಲ್ಲೆಡೆ ಮೋದಿ ಅಲೆ ಇದೆ. ಹೀಗಾಗಿ ಬಿಜೆಪಿ 400 ಸ್ಥಾನಗಳನ್ನು ಗೆಲ್ಲಲಿದೆ. ಕರ್ನಾಟಕದಲ್ಲಿ 28 ಗೆಲ್ಲುತ್ತೇವೆ. ಇದರಲ್ಲಿ ಬಳ್ಳಾರಿಯೂ ಒಂದಾಗಿರಲಿದೆ‘ ಎಂದು ಶ್ರೀರಾಮುಲು ಹೇಳಿದರು.
ಮುಂದುವರೆದು, ‘ಉತ್ತರ ಪ್ರದೇಶದ ರಾಯಬರೇಲಿಯಿಂದ ಲೋಕಸಭೆಗೆ ಸ್ಪರ್ಧಿಸಲಾಗದೇ ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಹೋಗಿದ್ದಾರೆ. ಅಮೇಠಿಯಲ್ಲಿ ಸ್ಪರ್ಧಿಸಲಾಗದೇ ರಾಹುಲ್ ಗಾಂಧಿ ಕೇರಳದ ವಯನಾಡಿಗೆ ಹೋಗಿದ್ದಾರೆ. ಪ್ರಿಯಾಂಕಾ ಗಾಂಧಿ ‘ಈ ಬಾರಿ ಬೇಡ, ಮುಂದಿನ ಬಾರಿ ನೋಡೋಣ’ ಅನ್ನುತ್ತಿದ್ದಾರೆ. ಕಾಂಗ್ರೆಸ್‌ಗೆ ದೇಶದಲ್ಲಿ ಅಭ್ಯರ್ಥಿಗಳೇ ಇಲ್ಲ‘ ಎಂದು ವ್ಯಂಗ್ಯವಾಡಿದರು.
‘ಶ್ರೀರಾಮುಲು ಮತ್ತು ತಂಡ ಕೌರವರಿದ್ದಂತೆ. ಅವರನ್ನು ಸೋಲಿಸುತ್ತೇವೆ’ ಎಂದು ಸಚಿವ ಬಿ. ನಾಗೇಂದ್ರ ಅವರು ಸೋಮವಾರ ಸಂಜೆ ಮೋಕಾದಲ್ಲಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಇವರೆಲ್ಲ ಮಧ್ಯರಾತ್ರಿ ನಾಯಕರಾದವರು. ಅದಕ್ಕೇ ಹೀಗೇ ಮಾತನಾಡುತ್ತಾರೆ. ಯಾರದ್ದೋ ಹೆಸರು ಹೇಳಿಕೊಂಡು ಇವರೆಲ್ಲ ದೊಡ್ಡವರಾದವರು. ಭೂತದ ಬಾಯಲ್ಲಿ ಭಗವದ್ಗೀತೆ ಬರುತ್ತಿದೆ. ಮಹಾಭಾರತ, ಭವಿಷ್ಯವನ್ನೂ ಅವರು ಹೇಳುತ್ತಿದ್ದಾರೆ. ಇವರಿಗೆಲ್ಲ ಆನೆಯಂತೆ ಮದವೇರಿದೆ. ನರಿಗಳು ಕುತಂತ್ರ ಮಾಡುತ್ತಿವೆ. ಕೌರವ–ಪಾಂಡವ ಯಾರೆಂದು ಜನ ತೀರ್ಮಾನಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
'ನನ್ನನ್ನು ಸೋಲಿಸಲು ಕಾಂಗ್ರೆಸ್‌ನವರು ತಂತ್ರ - ಕುತಂತ್ರ ಏನೇ ಮಾಡಲಿ, ಅವರದ್ದೇ ಸರಕಾರ ಇದೆ, ಅವರ ಶಕ್ತಿಯಿಂದ ಅವರು ಏನೇ
ಪ್ರಯತ್ನ ಮಾಡಲಿ, ಈ ದೇಶ ಉಳಿಯಬೇಕಾದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಯುವ ಮತದಾರರು ಬಯಸಿದ್ದಾರೆ. ಈ ದೇಶಕ್ಕೆ ಮೋದಿಯವರ ಅವಶ್ಯಕತೆ ಇದೆ ಎಂದು ಜನ ನಿರ್ಣಯಿಸಿದ್ದಾರೆ. ಹಾಗಾಗಿ ಶ್ರೀರಾಮುಲು ಅವರನ್ನು ಗೆಲ್ಲಿಸಲು ಜನ ತೀರ್ಮಾನ ಮಾಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಲವಾರು ಬಾರಿ ಗೆದ್ದಿದೆ, ಈ ಕ್ಷೇತ್ರವನ್ನು ನಾವು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಕಳೆದು ಹತ್ತು ದಿನಗಳಿಂದ ನಾನು ಅನೇಕ ತಾಲೂಕುಗಳಲ್ಲಿ ಪ್ರಚಾರ ಮಾಡುತ್ತಾ ಬಂದಿದ್ದೇನೆ. ಜನ ಒಳ್ಳೆಯ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಶ್ರೀರಾಮುಲು ಅವರನ್ನು ಕಳೆದ ಬಾರಿ ಸೋಲಿಸಿದ್ದಕ್ಕೆ ಜನ ತುಂಬಾ ನೋವು ಪಟ್ಟಿದ್ದಾರೆ. ಶ್ರೀರಾಮುಲು ರಾಜಕಾರಣದಿಂದ ಕಳೆದು ಹೋಗಬಾರದು, ಶ್ರೀರಾಮುಲು ಜನರ ಮಧ್ಯೆ ಇರಬೇಕು. ಕಳೆದ ಮೂವತ್ತು ವರ್ಷಗಳಿಂದ ಶ್ರೀರಾಮುಲು ರಾಜಕಾರಣದಲ್ಲಿದ್ದು, ಜನ ಸೇವೆ ಮಾಡಿದ್ದಾರೆ. ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂಬುದು ಜನತೆಯ ಅಭಿಪ್ರಾಯ. ಹಾಗಾಗಿ ಈ ಸಾರಿ ಜನ ಸಂಕಲ್ಪ ಮಾಡಿ ನನ್ನನ್ನು ಗೆಲ್ಲಿಸಲಿದ್ದಾರೆ, ಕೈ ಬಿಡುವ ಪ್ರಶ್ನೇಯೇ ಇಲ್ಲ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಅಮಿತ್ ಶಾಗೂ ಹೇಳಿ ಬರುತ್ತೇನೆ: ಕೆ.ಎಸ್. ಈಶ್ವರಪ್ಪ - K S Eshwarappa