ಬೆಂಗಳೂರು: "ರಾಹುಲ್ ಗಾಂಧಿ ನಾಯಕತ್ವ ವಿಫಲವಾಗಿರುವುದರಿಂದ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ಮೇಲೆ ವಿವಾದ ಸೃಷ್ಟಿಸಿ ಜನ ಬೆಂಬಲ ಪಡೆಯಬಹುದೆಂಬ ಭ್ರಮೆಯಲ್ಲಿದ್ದಾರೆ. ಆದರೆ, ಚಾರ್ ಸೌ ಪಾರ್ ಎಂಬ ಮೋದಿ ಘೋಷಣೆಗೆ ಈಗಾಗಲೇ ಜನ ಮನ್ನಣೆ ನೀಡಿಯಾಗಿದೆ. 400 ಸ್ಥಾನಕ್ಕೆ ರಾಜ್ಯದ 28 ಕ್ಷೇತ್ರದ ಗೆಲುವಿನ ಕೊಡುಗೆಯೂ ಬರಲಿದೆ" ಎಂದು ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಲೋಕಸಭಾ ಚುನಾವಣೆ ನಡೆಯುತ್ತಿದೆ ಎಂಬುದನ್ನು ಕಾಂಗ್ರೆಸ್ನವರು ಮರೆತು ಹೋಗಿದ್ದಾರೆ ಎಂಬ ರೀತಿ ಭಾಸವಾಗುತ್ತಿದೆ. ರಾಹುಲ್ ಗಾಂಧಿ ನಾಯಕತ್ವ ವಿಫಲವಾಗಿರುವುದರಿಂದ ಯಾವ ನಾಯಕ ಕೂಡಾ ಅವರ ಹೆಸರು ಹೇಳಲು ರೆಡಿ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ವಿಶ್ವಾಸಾರ್ಹ ನಾಯಕ ಇಲ್ಲದೇ ಕೇಂದ್ರ ಸರ್ಕಾರದ ಮೇಲೆ ವಿವಾದ ಸೃಷ್ಟಿಸಿ ಜನ ಬೆಂಬಲ ಪಡೆಯಬಹುದು ಎಂಬ ಭ್ರಮೆಯಲ್ಲಿದ್ದಾರೆ. ಮೋದಿ ಕೆಲಸಗಳ ಆಧಾರದ ಮೇಲೆ ನಾವು ಚುನಾವಣೆ ಎದುರಿಸುತ್ತಿದ್ದೇವೆ. ಬೆಂಗಳೂರಿನ ಹೆಚ್ಎಎಲ್ ಮುಚ್ಚುತ್ತಾರೆ ಎಂದು ಅಪಪ್ರಚಾರ ಮಾಡಿದರು. ಆದರೆ ಇಂದು ಹೆಚ್ಎಎಲ್ ದಾಖಲೆಯ ಆದಾಯಗಳಿಸಿದೆ. ಅಪಪ್ರಚಾರ ಮಾಡಿದ ರಾಹುಲ್ ಗಾಂಧಿ ಕ್ಷಮೆ ಕೇಳುತ್ತಾರಾ? ಡಿ.ಕೆ. ಶಿವಕುಮಾರ್ ಕ್ಷಮೆ ಕೊಡಿಸುತ್ತಾರಾ?" ಎಂದು ಪ್ರಶ್ನಿಸಿದರು.
ಮುಂದುವರೆದು, "ಎರಡು ಕೋಟಿ ಜಾಬ್ ನೀಡಿದ್ರಾ ಎಂದು ಕಾಂಗ್ರೆಸ್ ಕೇಳುತ್ತದೆ. ನಾವು ಬಂದ ನಂತರ 2023ರ ತನಕ 7 ಕೋಟಿ ಉದ್ಯೋಗ ಸೃಷ್ಟಿ ಆಗಿದೆ. ಆದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಎಷ್ಟು ಉದ್ಯೋಗ ನೀಡಿದ್ದಾರೆ?. ಕೇವಲ ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ ಎಕ್ಸ್ ಖಾತೆಯಲ್ಲಿ ಮಾತ್ರ ಉದ್ಯೋಗ ಸೃಷ್ಟಿಯಾಗಿದೆ. ಹತ್ತು ತಿಂಗಳಲ್ಲಿ ಒಂದೇ ಒಂದು ಉದ್ಯೋಗ ಕೊಡದಿರುವುದು ಸಿದ್ದರಾಮಯ್ಯ ಸರ್ಕಾರದ ದಾಖಲೆಯಾಗಿದೆ" ಎಂದು ಟೀಕಿಸಿದರು.
"ಕಲಬುರಗಿ ಬೀದರ್ ರೈಲು ಮಾರ್ಗ ಪೂರ್ಣ ಆಗಿದೆ. ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದರೂ ಅದು ಆಗಿರಲಿಲ್ಲ. ಆದರೆ, ಈಗ ಆಗಿದೆ. ಆರು ವಂದೇ ಭಾರತ್ ರೈಲು ಸೇವೆ ದೊರಕಿದೆ. ಗರೀಬ್ ಕಲ್ಯಾಣ ಯೋಜನೆಯಡಿ ನಾಲ್ಕು ವರ್ಷಗಳಿಂದ ಉಚಿತ ಅಕ್ಕಿ ನೀಡುತ್ತಾ ಇದ್ದೇವೆ. ಆಶ್ವಾಸನೆ ನೀಡಿದ ಹತ್ತು ಕೆಜಿ ಅಕ್ಕಿಯಲ್ಲಿ ಒಂದು ಕೆಜಿ ಕೂಡಾ ನೀಡದಿರುವುದು ರಾಜ್ಯ ಸರ್ಕಾರದ ಸಾಧನೆಯಾಗಿದೆ. ಕಿಸಾನ್ ಸಮ್ಮಾನ್ ಜೊತೆ ನಾವು ನೀಡುತ್ತಿದ್ದ 4,000 ರೂ. ನಿಲ್ಲಿಸಿರುವುದು ಈ ಸರ್ಕಾರ ದಿವಾಳಿಯಾಗಿದೆ ಎನ್ನುವುದನ್ನು ಸಾಬೀತುಪಡಿಸಿದೆ".