ಬೆಂಗಳೂರು : ಮದ್ಯ ಸೇವಿಸಿ ಅನ್ಯ ಮಾರ್ಗದಲ್ಲಿ ಹೋಗುವುದಲ್ಲದೆ ಮಹಿಳಾ ಪ್ಯಾಸೆಂಜರ್ ಮೇಲೆ ದುರ್ನಡತೆ ತೋರಿದ್ದ ಆಟೋ ಚಾಲಕನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನ ಸುನಿಲ್ ಎಂದು ಗುರುತಿಸಲಾಗಿದೆ.
ಆರೋಪಿ ಚಾಲಕನ ವರ್ತನೆಯಿಂದ ಆತಂಕಗೊಂಡ ಮಹಿಳಾ ಪ್ರಯಾಣಿಕರೊಬ್ಬರು ಚಲಿಸುತ್ತಿದ್ದ ಆಟೋದಿಂದ ಜಿಗಿದು ತಪ್ಪಿಸಿಕೊಂಡಿರುವ ಘಟನೆ ಗುರುವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಿತ್ತು.
ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ವಿ.ಸಜೀತ್ ಅವರಿಂದ ಮಾಹಿತಿ (ETV Bharat) ಥಣಿಸಂದ್ರದ ನಿವಾಸಿಯಾಗಿದ್ದ ಮಹಿಳೆ, ಗುರುವಾರ ರಾತ್ರಿ ಕೆಲಸದ ನಿಮಿತ್ತ ಹೊರ ಹೋಗಿದ್ದರು. ವಾಪಸ್ ಮನೆಗೆ ತೆರಳಲು ಹೊರಮಾವಿನಿಂದ ಥಣಿಸಂದ್ರಕ್ಕೆ ಆ್ಯಪ್ ಮೂಲಕ ಆಟೋ ಬುಕ್ ಮಾಡಿದ್ದರು. 8.55ರ ಸುಮಾರಿಗೆ ಪಿಕಪ್ ಲೊಕೇಷನ್ ಬಳಿ ಬಂದಿದ್ದ ಆಟೋ ಚಾಲಕನು ಮಹಿಳೆಯನ್ನ ಥಣಿಸಂದ್ರಕ್ಕೆ ಡ್ರಾಪ್ ಮಾಡದೇ ಹೆಬ್ಬಾಳ ಕಡೆ ಹೋಗಲಾರಂಭಿಸಿದ್ದ.
ತಪ್ಪಾದ ದಾರಿಯಲ್ಲಿ ಹೋಗುತ್ತಿರುವುದನ್ನ ಗಮನಿಸಿದ ಮಹಿಳೆ, ಚಾಲಕನಿಗೆ ಹೇಳಿದರೂ ಸಹ ಆತ ಪ್ರತಿಕ್ರಿಯಿಸಿರಲಿರಲಿಲ್ಲ. ಆಟೋ ನಿಲ್ಲಿಸುವಂತೆ ಸೂಚಿಸಿದರೂ ಚಾಲನೆ ಮುಂದುವರಿಸಿದ್ದ. ಇದರಿಂದ ಆತಂಕಗೊಂಡ ಮಹಿಳೆ ಚಲಿಸುತ್ತಿರುವಾಗಲೇ ಆಟೋದಿಂದ ಜಿಗಿದಿದ್ದರು. ಘಟನೆಯ ಕುರಿತು ಮಹಿಳೆಯ ಪತಿ ಅಜರ್ ಖಾನ್ ಎಕ್ಸ್ ಆ್ಯಪ್ ಮೂಲಕ ಪೊಲೀಸರಿಗೆ ದೂರು ನೀಡಿದ್ದರು.
ಬಳಿಕ ಅಜರ್ ನೀಡಿದ ಲಿಖಿತ ದೂರನ್ನ ಆಧರಿಸಿ ತನಿಖೆ ಕೈಗೊಂಡ ಅಮೃತಹಳ್ಳಿ ಠಾಣೆ ಪೊಲೀಸರು, ಆರೋಪಿ ಚಾಲಕನನ್ನು ಪತ್ತೆ ಹಚ್ಚಿ ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ದುರ್ನಡತೆ ತೋರಿದ ಚಾಲಕ, ಚಲಿಸುತ್ತಿದ್ದ ಆಟೋದಿಂದ ಜಿಗಿದ ಮಹಿಳೆ - WOMAN JUMPS FROM MOVING AUTO
''ಆಟೋ ಚಾಲಕನ್ನ ಬಂಧಿಸಲಾಗಿದೆ. ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂಗೂರು ಮೂಲದವನಾಗಿರುವ ಆರೋಪಿ ಒಂದೂವರೇ ತಿಂಗಳಿನ ಹಿಂದೆ ಬೆಂಗಳೂರಿಗೆ ಬಂದಿದ್ದ. ಬೆಂಗಳೂರಿನ ವಿಳಾಸಗಳ ಬಗ್ಗೆ ಆತನಿಗೂ ಗೊಂದಲಗಳಿರುವುದು ಸಹಜ. ಜೊತೆಗೆ ಮದ್ಯಪಾನದ ಅಭ್ಯಾಸ ಹೊಂದಿದ್ದ. ವಿಳಾಸದ ಪ್ರಕಾರ ಹೋಗದೆ ಹೆಬ್ಬಾಳ ಫ್ಲೈ ಓವರ್ ಮೇಲೆ ಹೋಗಿದ್ದಾನೆ. ಇದರಿಂದ ಗಾಬರಿಯಾದ ಮಹಿಳೆ ಆಟೋ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆಟೋ ನಿಲ್ಲಿಸದಿದ್ದಾಗ ಆತನನ್ನ ನಿಲ್ಲಿಸುವಂತೆ ಆಗ್ರಹಿಸಿ, ನಂತರ ಕೆಳಗೆ ಇಳಿದು, ಹಣ ಪಾವತಿಸಿದ್ದಾರೆ. ಬಳಿಕ ಗಂಡನಿಗೆ ಕರೆ ಮಾಡಿ ಬೇರೆ ಆಟೋ ಪಡೆದು ಮನೆಗೆ ಹೋಗಿದ್ದಾರೆ. ಸದ್ಯ ಮಹಿಳೆಯ ಗಂಡ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಲಾಗಿದೆ'' ಎಂದು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ವಿ.ಸಜೀತ್ ಮಾಹಿತಿ ನೀಡಿದ್ದಾರೆ.