ಬೆಂಗಳೂರು :ಅದು ಗ್ರಾಮಸ್ಥರೇ ಹಣ ಸೇರಿಸಿ ನಿಲ್ಲಿಸಿದ ಧ್ವಜಸ್ತಂಭ. ಪಂಚಾಯತ್ ಕೂಡ ರಾಷ್ಟ್ರಧ್ವಜ, ನಾಡಧ್ವಜ, ಭಗವಾಧ್ವಜ ಹಾರಿಸಲು ಅನುಮತಿ ಕೊಟ್ಟಿದೆ. ಆದರೂ ಸರ್ಕಾರವೇ ವಿವಾದ ಮಾಡುತ್ತಿದೆ. ಇವರು ಸಂವಿಧಾನ ಜಾಗೃತಿ ಸಪ್ತಾಹ ಮಾಡುತ್ತಾರೆ. ಈ ಸರ್ಕಾರದವರು ಸಂವಿಧಾನ ಗೌರವಿಸುತ್ತಾರಾ? ಇವರಿಗೆ ಮೊದಲು ಜಾಗೃತಿ ಮೂಡಿಸಬೇಕಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಟೀಕಿಸಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇವರಿಗೆ ಸಂವಿಧಾನ ಕುರಿತ ಪರಿಜ್ಞಾನ ಇಲ್ಲ. ಇವರು ಜನರ ಭಾವನೆ ಅರ್ಥ ಮಾಡಿಕೊಂಡಿಲ್ಲ. ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.
ಕೆರೆಗೋಡಿನಲ್ಲಿ ಕಾನೂನು ಪ್ರಕಾರ ಅನುಮತಿ ಪಡೆದೇ ಧ್ವಜ ಹಾರಿಸಿದ್ದಾರೆ. ಕಾನೂನು ಪ್ರಕಾರ ತಪ್ಪಾಗಿದ್ದರೆ ನೊಟೀಸ್ ಕೊಡಬೇಕಿತ್ತು ತಾನೇ?. ಈಗಲಾದರೂ ಸರ್ಕಾರ ಗ್ರಾಮಸ್ಥರ ಭಾವನೆಗೆ ಗೌರವ ಕೊಡುವ ಕೆಲಸ ಮಾಡಲಿ. ಏಕಾಏಕಿ ಮುಂಜಾನೆ ಹೋಗಿ ಭಗವಾಧ್ವಜ ಇಳಿಸಿದ್ದು ಸರಿಯೇ?. ನಿಯಮ ಮೀರಿ ರಾಷ್ಟ್ರಧ್ವಜ ಹಾರಿಸಿದ್ದು ಸರಿಯೇ?. ಸ್ಥಳೀಯರು ಕೆರೆಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇನ್ನೂ ಏಕೆ ಎಫ್‍ಐಆರ್ ದಾಖಲು ಮಾಡಿಲ್ಲ ಎಂದು ಕೇಳಿದ್ದಾರೆ. ರಾಷ್ಟ್ರಧ್ವಜವನ್ನು ಪೂರ್ತಿ ಏರಿಸಿಲ್ಲ. ಇದೇನು ಸರ್ಕಾರವೇ? ಯಾವ ರೀತಿ ನಡವಳಿಕೆ ಇದು? ಇದೊಂದು ತುಘಲಕ್ ಸರ್ಕಾರ. ಕಾನೂನನ್ನು ಇವರು ಗೌರವಿಸುವುದಿಲ್ಲ ಎಂದು ಟೀಕಿಸಿದ್ದಾರೆ.
ಮಂಡ್ಯದ ಕೆರೆಗೋಡಿಗೆ ಸ್ಥಳೀಯ ಸಂಸದೆ ಸುಮಲತಾ ಯಾಕೆ ಹೋಗಿಲ್ಲ ಅಂತ ನಾನು ಚರ್ಚೆ ಮಾಡಿಲ್ಲ. ಪಕ್ಷಾತೀತವಾಗಿ ಅಲ್ಲಿ ಹೋರಾಟ ನಡೆದಿದೆ. ಆ ವಿಚಾರದಲ್ಲಿ ಇಡೀ ಸಮಾಜ ಒಟ್ಟಾಗಿದೆ. ಭಗವಾಧ್ವಜಕ್ಕೆ ಕಾಂಗ್ರೆಸ್ ಬಿಟ್ಟು ಎಲ್ಲರೂ ಗೌರವ ಕೊಡುತ್ತಾರೆ. ಇಡೀ ನಾಡಿನಲ್ಲಿ ಎಷ್ಟು ಧ್ವಜ ಕಂಬಗಳಿವೆ. ಅಲ್ಲೆಲ್ಲ ಹೋಗಿ ನೋಡಿಕೊಂಡು ಬಂದಿದ್ದಾರಾ?. ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದಿತ್ತು. ಗ್ರಾಮಸ್ಥರು ದೂರು ನೀಡಿದ್ದಾರೆ. ಇನ್ನೂ ಏಕೆ ಎಫ್ಐಆರ್ ಮಾಡಿಲ್ಲ. ಯಾವಾಗ ಬೇಕಾದರೂ ರಾಷ್ಟ್ರ ಧ್ವಜ ಹಾರಿಸಬಹುದಾ? ಸಂವಿಧಾನಕ್ಕೆ ಗೌರವ ಇದೆಯಾ? ಕೆರೆಗೋಡು ಜನರು ಕಾಂಗ್ರೆಸ್ ಶಾಸಕರನ್ನ ಆಯ್ಕೆ ಮಾಡಿದ್ದಾರೆ. ಅವರು ಜನರಿಗೆ ಗೌರವ ನೀಡಿಲ್ಲ. ಸಂಸದರು ಏಕೆ ಹೋಗಿಲ್ಲ ಎಂದು ಅವರೇ ಹೇಳಬೇಕು. ಕಾಂಗ್ರೆಸ್ನವರು ರಾಂಗ್ ವೇ ಹೆಜ್ಜೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.