ಕರ್ನಾಟಕ

karnataka

ETV Bharat / state

ಭೂ ನ್ಯಾಯಮಂಡಳಿಯಿಂದ ಮಂಜೂರಾದ ಜಮೀನು ಮರುಸ್ಥಾಪಿಸಲು ಉಪವಿಭಾಗಾಧಿಕಾರಿಗೆ ಅವಕಾಶವಿಲ್ಲ: ಹೈಕೋರ್ಟ್ - Land Restoration Order - LAND RESTORATION ORDER

ಭೂ ನ್ಯಾಯ ಮಂಡಳಿಗಳಿಂದ ಮಂಜೂರಾದ ಜಮೀನನ್ನು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯಿದೆಯಡಿ ಪುನರ್ ಸ್ಥಾಪಿಸಲು ಉಪವಿಭಾಗಾಧಿಕಾರಿಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಹೇಳಿದೆ.

high court
ಹೈಕೋರ್ಟ್ (ETV Bharat)

By ETV Bharat Karnataka Team

Published : May 11, 2024, 5:35 PM IST

ಬೆಂಗಳೂರು:ಕರ್ನಾಟಕ ಭೂ ಸುಧಾರಣಾ ಕಾಯಿದೆ ಅಡಿ ಭೂ ನ್ಯಾಯ ಮಂಡಳಿಗಳಿಂದ ಮಂಜೂರಾಗಿರುವ ಜಮೀನುಗಳನ್ನು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಜಮೀನುಗಳ ವರ್ಗಾವಣೆ ನಿಷೇಧ) ಕಾಯಿದೆ (ಪಿಟಿಸಿಎಲ್) ಅಡಿ ಪುನರ್ ಸ್ಥಾಪಿಸಲು ಉಪವಿಭಾಗಾಧಿಕಾರಿಗೆ (ಎಸಿ) ಅಧಿಕಾರವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಸರ್ಕಾರದಿಂದ ಮಂಜೂರಾದ ಜಮೀನುಗಳನ್ನು ಪಿಟಿಸಿಎಲ್ ಕಾಯಿದೆಯಡಿ ಪುನರ್ ಸ್ಥಾಪಿಸಲು ಉಪವಿಭಾಗಾಧಿಕಾರಿಗಳಿಗೆ ಅಧಿಕಾರವಿದೆ. ಆದರೆ, ಭೂ ಸುಧಾರಣಾ ನ್ಯಾಯಮಂಡಳಿಯಿಂದ ಮಂಜೂರಾದ ಜಮೀನುಗಳನ್ನು ಪುನರ್ ಸ್ಥಾಪಿಸಲು ಅಧಿಕಾರವಿಲ್ಲ ಎಂದು ಜಮೀನು ಖರೀದಿಸಿದ್ದ ಶಂಕರೇಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಕಲಬುರಗಿ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೇ, ಜಮೀನು ಮಂಜೂರಾಗಿರುವುದು 1976ರಲ್ಲಿ, 6 ವರ್ಷಗಳ ಕಾಲ ಮಾರಾಟ ಮಾಡಬಾರದು ಎಂಬುದಾಗಿ ವಿಧಿಸಿದ್ದ ಷರತ್ತು 1982ರಲ್ಲಿ ಮುಕ್ತಾಯವಾಗಿದೆ. 28 ವರ್ಷಗಳ ಬಳಿಕ ಈ ಜಮೀನನ್ನು ಮಾರಾಟ ಮಾಡಲಾಗಿದೆ. ಜಮೀನು ಮಂಜೂರಾದ ಸಂದರ್ಭದಲ್ಲಿನ ಷರತ್ತು ಅವಧಿ ಪೂರ್ಣಗೊಂಡ ಬಳಿಕ ಮಾಲೀತ್ವದ ಹಕ್ಕನ್ನು ಚಲಾಯಿಸುವ ನಿರ್ಬಂಧ ಜಾರಿಯಲ್ಲಿರುವುದಿಲ್ಲ ಎಂದು ಪೀಠ ತಿಳಿಸಿದೆ.

ಅಲ್ಲದೆ, ಭೂ ಮಂಜೂರು ಮಾಡುವ ಸಂದರ್ಭದಲ್ಲಿ ವಿಧಿಸಿದ್ದ ಷರತ್ತುಗಳನ್ನು ಪೂರ್ಣಗೊಳಿಸಿದ ಬಳಿಕ ನಾಗಪ್ಪ ಅವರು ಆ ಜಮೀನಿನ ಮಾಲೀಕರಾಗುತ್ತಾರೆ. ಆ ಜಮೀನಿನಲ್ಲಿ ದುಡಿಯುವುದು, ಮಾರಾಟ ಮಾಡುವುದು ಸೇರಿದಂತೆ ಎಲ್ಲ ರೀತಿಯಲ್ಲಿಯೂ ಅನುಭವಿಸಲು ಹಕ್ಕುದಾರರಾಗಿರುತ್ತಾರೆ. ಆದ್ದರಿಂದ ನಾಗಪ್ಪನವರ ಮಕ್ಕಳು ಪಿಟಿಸಿಎಲ್ ಕಾಯಿದೆ ಮೂಲಕ ಮರುಸ್ಥಾಪನೆಗೆ ಕೋರಿ ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದು ಪೀಠ ಹೇಳಿದೆ.

ಜೊತೆಗೆ, ಉಪವಿಭಾಗಾಧಿಕಾರಿಗಳಿಗೆ ಪಿಟಿಸಿಎಲ್ ಕಾಯಿದೆಯ ಸೆಕ್ಷನ್ 4(2) ಅಡಿ ಜಮೀನನ್ನು ಮರುಸ್ಥಾಪನೆ ಮಾಡಿ ಆದೇಶ ನೀಡುವುದಕ್ಕೆ ಅಧಿಕಾರವಿಲ್ಲ. ಅಲ್ಲದೆ, ಮೇಲ್ಮನವಿ ಪ್ರಾಧಿಕಾರವಾಗಿರುವ ಜಿಲ್ಲಾಧಿಕಾರಿಗಳು ಈ ಕುರಿತಂತೆ ಗಮನ ಹರಿಸದೇ ಆದೇಶ ಮಾಡಿದ್ದಾರೆ ಎಂದು ತಿಳಿಸಿದ ಪೀಠ, ಅರ್ಜಿಯನ್ನು ಪುರಸ್ಕರಿಸಿದ್ದು, ಜಿಲ್ಲಾಧಿಕಾರಿಗಳ ಆದೇಶ ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:ವಿಜಯಪುರ ಜಿಲ್ಲೆಯ ಇಂಡಿ ಎಂಬಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ನಾಗಪ್ಪ ಎಂಬುವರಿಗೆ 1976ರಲ್ಲಿ ಭೂ ನ್ಯಾಯಾಧಿಕರಣ 5 ಎಕರೆ ಜಮೀನನ್ನು ಮಂಜೂರು ಮಾಡಿತ್ತು. ಈ ಜಮೀನನ್ನು ಆರು ವರ್ಷಗಳ ಕಾಲ ಪರಾಭಾರೆ ಮಾಡಬಾರದು ಎಂಬ ಷರತ್ತನ್ನು ವಿಧಿಸಲಾಗಿತ್ತು. ಈ ಜಮೀನಿನ ಪೈಕಿ 3 ಎಕರೆ ಜಮೀನನ್ನು 2004ರಲ್ಲಿ ನಾಗಪ್ಪ ಅವರು ಶಂಕರೇಪ್ಪ ಎಂಬುವರಿಗೆ ಮಾರಾಟ ಮಾಡಿದ್ದರು.

ನಾಗಪ್ಪ ಮೃತಪಟ್ಟ ಬಳಿಕ ಅವರ ಮಕ್ಕಳು 2004ರಲ್ಲಿ ಮಾರಾಟ ಮಾಡಿದ್ದ 3 ಎಕರೆ ಜಮೀನನ್ನು ತಮ್ಮ ಹೆಸರಿಗೆ ಮರುಸ್ಥಾಪನೆ ಮಾಡಬೇಕು ಎಂದು ಕೋರಿ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದರು. ಇದನ್ನು ಉಪವಿಭಾಗಾಧಿಕಾರಿಗಳು ಪುರಸ್ಕರಿಸಿ ಆದೇಶಿಸಿದ್ದರು. ಅಲ್ಲದೆ, ಜಮೀನು ಮಂಜೂರಾದ ಬಳಿಕ 28 ವರ್ಷಗಳಲ್ಲಿ ಅದನ್ನು ಪರಾಭಾರೆ ಮಾಡಲಾಗಿದೆ. 2004ರಲ್ಲಿ ಜಮೀನು ಮಾರಾಟ ನೋಂದಣಿಯೂ ಆಗಿದೆ. ಆದರೆ, ನಾಗಪ್ಪನವರ ವಾರಸುದಾರರು 2014ರಲ್ಲಿ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದರು.

ಈ ಆದೇಶ ಪ್ರಶ್ನಿಸಿ ಶಂಕರೇಪ್ಪ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಜಿಲ್ಲಾಧಿಕಾರಿಗಳು ತಿರಸ್ಕರಿಸಿ, ಉಪವಿಭಾಗಾಧಿಕಾರಿಗಳ ಆದೇಶ ಎತ್ತಿಹಿಡಿದಿದ್ದರು. ಇದನ್ನು ಪ್ರಶ್ನಿಸಿ ಶಂಕರೇಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಶಂಕರೇಪ್ಪ ಪರ ವಕೀಲರು, ''ಈ ಜಮೀನನ್ನು ಭೂ ನ್ಯಾಯಾಧಿಕರಣ ಮಂಜೂರು ಮಾಡಿದೆ. ಆದರೆ, ಸರ್ಕಾರದಿಂದ ಮಂಜೂರು ಮಾಡಿಲ್ಲ. ಆದ್ದರಿಂದ ಪಿಟಿಸಿಎಲ್ ಕಾಯಿದೆಗೆ ಈ ಜಮೀನಿಗೆ ಅನ್ವಯವಾಗುವುದಿಲ್ಲ. ಆದರೆ, ಈ ಅಂಶವನ್ನು ಉಪ ವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಪರಿಗಣನೆಗೆ ತೆಗೆದುಕೊಂಡಿಲ್ಲ. ಇದು ನ್ಯಾಯ ಪ್ರಕ್ರಿಯೆಯ ದುರ್ಬಳಕೆಯಾದಂತಾಗಿದೆ'' ಎಂದು ವಾದ ಮಂಡಿಸಿದ್ದರು.

ಇದನ್ನೂ ಓದಿ:ಗ್ರಾ.ಪಂ ಸದಸ್ಯರ ಗುತ್ತಿಗೆ ಅಸ್ತಿತ್ವದಲ್ಲಿದ್ದರೆ ಮಾತ್ರ ಸದಸ್ಯತ್ವ ಅನರ್ಹಗೊಳಿಸಬಹುದು: ಹೈಕೋರ್ಟ್

ABOUT THE AUTHOR

...view details