ಬೆಳಗಾವಿ:''ಬಾಂಬ್ ಇಟ್ಟವರು ದೇಶದ್ರೋಹಿಗಳು. ಅವರಿಗೆ ಯಾವುದೇ ಜಾತಿ, ಧರ್ಮ, ವರ್ಗವಿಲ್ಲ. ಮನುಷ್ಯತ್ವ, ಕರುಣೆ ಇಲ್ಲದವರನ್ನು ನಾವು ಯಾರೂ ಕೂಡ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ'' ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ವಿಚಾರಕ್ಕೆ ಬೆಳಗಾವಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ''ಶಾಂತಿಯುತ, ನಿರ್ಭಯ ಸಮಾಜದಲ್ಲಿ ಮಾತ್ರ ಅಭಿವೃದ್ಧಿ ಮತ್ತು ಜನ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಶಾಂತಿಯುತ ರಾಜ್ಯವನ್ನು ಹದಗೆಡಿಸಲು ಪ್ರಯತ್ನಿಸಿದವರನ್ನು ಮಟ್ಟ ಹಾಕಲು ಸರ್ಕಾರ ಕ್ರಮ ಕೈಗೊಂಡಿದೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು. ಇದರ ಹಿಂದೆ ಯಾರಿದ್ದಾರೆ? ಅವರ ಉದ್ದೇಶ ಏನಾಗಿತ್ತು ಎಂಬುದನ್ನು ಬಯಲು ಮಾಡಬೇಕು. ಅದೇ ರೀತಿ ಮುಂದೆ ಈ ರೀತಿ ಕೃತ್ಯ ಮಾಡಲು ಯಾರಿಗೂ ಧೈರ್ಯ ಬಾರದಂತಹ ಶಿಕ್ಷೆ ವಿಧಿಸಬೇಕು'' ಎಂದು ಆಗ್ರಹಿಸಿದರು.
ಬಾಂಬ್ ಇಟ್ಟವರಿಗೆ ಕಠಿಣ ಶಿಕ್ಷೆ ಆಗಬೇಕು:''ಈ ಸಂದರ್ಭದಲ್ಲಿ ಯಾರೂ ಸಹ ರಾಜಕಾರಣ ಮಾಡಬಾರದು. ಆ ರೀತಿ ಮಾಡಿದರೆ ಅದು ರಾಜ್ಯದ ಹಿತಾಸಕ್ತಿಗೆ ಅನುಗುಣವಾಗಿ ಇರುವುದಿಲ್ಲ. ಈಗ ನಾವೆಲ್ಲ ಒಗ್ಗಟ್ಟಾಗಿರಬೇಕು. ಅದನ್ನು ಬಿಟ್ಟು ನಮ್ಮ ನಡುವೆ ಭಿನ್ನಾಭಿಪ್ರಾಯ ಮೂಡಿದರೆ, ದುಷ್ಕರ್ಮಿಗಳು ಅದರ ಲಾಭವನ್ನು ಪಡೆದುಕೊಳ್ಳುತ್ತಾರೆ. ಇನ್ನು ಯಾರೋ ಒಬ್ಬ ಮಾಡಿದ ತಪ್ಪಿಗೆ ಅವರ ಇಡೀ ವರ್ಗವನ್ನು ಗುರಿಯಾಗಿಸುವುದು ಸರಿಯಲ್ಲ. ಹಾಗಾಗಿ, ನಾವೆಲ್ಲಾ ಒಗ್ಗಟ್ಟಾಗಿರಬೇಕು. ಆ ದುಷ್ಕರ್ಮಿಗಳನ್ನು ಪತ್ತೆ ಹಚ್ಚಬೇಕು. ಬಾಂಬ್ ಇಟ್ಟವರಿಗೆ ಕಠಿಣ ಶಿಕ್ಷೆ ಆಗಬೇಕು'' ಎಂದರು.