ಬೆಳಗಾವಿ:ಸುವರ್ಣಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ವಂದೇಮಾತರಂ ಗಾಯನದ ಮೂಲಕ ವಿಧಾನಸಭೆ ಕಲಾಪಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ಸಂವಿಧಾನದ ಪ್ರಸ್ತಾವನೆ ಬೋಧಿಸಿದರು. ಸದನದ ಎಲ್ಲಾ ಸದಸ್ಯರು ಸ್ಪೀಕರ್ ಅವರ ಜೊತೆ ಪ್ರಸ್ತಾವನೆ ಬೋಧನೆಗೆ ಧ್ವನಿಗೂಡಿಸಿದರು. ತದನಂತರ ವಿಧಾನಸಭೆಯ ಉಪಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್‌ನ ಮೂವರು ನೂತನ ಸದಸ್ಯರು ಸದನದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಮೊದಲಿಗೆ ಸಂಡೂರು ಕ್ಷೇತ್ರದಿಂದ ಆಯ್ಕೆಯಾದ ಅನ್ನಪೂರ್ಣ ತುಕಾರಾಂ ಭಗವಂತನ ಹೆಸರಿನಲ್ಲಿ, ಶಿಗ್ಗಾಂವಿ ಕ್ಷೇತ್ರದಿಂದ ಆಯ್ಕೆಯಾದ ಪಠಾಣ್ ಯಾಸೀರ್ ಖಾನ್ ಅಹಮದ್ ಖಾನ್ ಅವರು ತಂದೆ, ತಾಯಿ ಹಾಗೂ ಸಂವಿಧಾನ ಹೆಸರಿನಲ್ಲಿ ಹಾಗೂ ಚನ್ನಪಟ್ಟಣ ಕ್ಷೇತ್ರದಿಂದ ಆಯ್ಕೆಯಾದ ಸಿ.ಪಿ.ಯೋಗೇಶ್ವರ್ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪಠಾಣ್ ಅವರು ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದು ಪ್ರಮಾಣವಚನ ಸ್ವೀಕರಿಸುವ ಮೂಲಕ ಸದನದ ಗಮನ ಸೆಳೆದರು.