ಬೆಂಗಳೂರು: ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆಯುವಂತಹ ಪ್ರಮುಖವಾದ ಮೂರು ನಿರ್ಣಯಗಳನ್ನು ವಿಧಾನಸಭೆಯಲ್ಲಿ ಇಂದು ಅಂಗೀಕರಿಸಲಾಯಿತು.
ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಸದಸ್ಯರ ಧರಣಿ ನಡುವೆಯೂ ರಾಜ್ಯ ಸರ್ಕಾರ, ಒಂದು ದೇಶ-ಒಂದು ಚುನಾವಣೆಯನ್ನು ವಿರೋಧಿಸುವ, ನೀಟ್ ಪರೀಕ್ಷೆಯಿಂದ ಕರ್ನಾಟಕಕ್ಕೆ ವಿನಾಯಿತಿ ನೀಡಲು ಆಗ್ರಹಿಸುವ ಹಾಗೂ ಲೋಕಸಭೆ ಹಾಗೂ ವಿಧಾನಸಭೆಗಳ ಕ್ಷೇತ್ರ ವಿಂಗಡಣೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡುವ ಮೂರು ಪ್ರಮುಖ ನಿರ್ಣಯಗಳನ್ನು ಹಾಗೂ ಅರಣ್ಯ ವಾಸಿ ಅನುಸೂಚಿತ ಬುಡಕಟ್ಟುಗಳಿಗೆ ಅರಣ್ಯ ಸಂರಕ್ಷಣಾ ಕಾಯ್ದೆಯಿಂದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸುವ ನಾಲ್ಕನೇ ನಿರ್ಣಯವನ್ನು ಮಂಡಿಸಲಾಯಿತು. ಸರ್ವಾನುಮತದಿಂದ ಅಂಗೀಕಾರಗೊಂಡಿವೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಪ್ರಕಟಿಸಿದರು.
ಒಂದು ದೇಶ-ಒಂದು ಚುನಾವಣೆ ನಿರ್ಣಯಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿ, ಸರ್ವಾನುಮತದ ಅಂಗೀಕಾರವನ್ನು ಆಕ್ಷೇಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್, 2026ರಲ್ಲಿನ ಅಥವಾ ಅದರ ನಂತರ ನಡೆಸುವ ಹೊಸ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣಾ ಪ್ರಕ್ರಿಯೆಯನ್ನು ನಡೆಸಬಾರದು. ಜನಸಂಖ್ಯೆಯನ್ನು ಆಧರಿಸಿ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಸಂದರ್ಭದಲ್ಲಿ ಪ್ರತಿ ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಮತ್ತು ಪ್ರತಿ ರಾಜ್ಯದ ವಿಧಾನಸಭೆಗೆ ನಿಗದಿಪಡಿಸಬೇಕಾದ ಸ್ಥಾನಗಳ ಒಟ್ಟು ಸಂಖ್ಯೆಯನ್ನು 1971ರ ಜನಗಣತಿಯನ್ನು ಆಧರಿಸಿ ನಿರ್ಧರಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.