ಬಂಟ್ವಾಳ (ದಕ್ಷಿಣ ಕನ್ನಡ):ಪರಿಯಾಲ್ತಡ್ಕದ ವೃದ್ಧ ದಂಪತಿಗಳ ಮೇಲೆ ಪಾದ್ರಿಯೊಬ್ಬರು ಹಲ್ಲೆ ನಡೆಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಿಯಾಲ್ತಡ್ಕದ ಕ್ರೈಸ್ಟ್ ಕಿಂಗ್ ಪ್ಯಾರಿಷ್ ನ ಪಾದ್ರಿ ಹಾಗೂ ವೃದ್ಧ ದಂಪತಿ ಮಧ್ಯೆ ಫೆ.29ರಂದು ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿದೆ.
ಮನೆಯ ಹೊರಗೆ ವೃದ್ಧ ದಂಪತಿ ಜೊತೆ ವಾಗ್ವಾದ ನಡೆಸಿದ ಬಳಿಕ ಹಲ್ಲೆ ನಡೆಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಪರಿಯಲ್ತಡ್ಕದ ಮನೇಲ ಎಂಬಲ್ಲಿ ಕ್ರೈಸ್ಟ್ ದಿ ಕಿಂಗ್ ಪ್ಯಾರಿಶ್ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಮಂಗಳೂರು ಕೆಥೊಲಿಕ್ ಧರ್ಮಪ್ರಾಂತ್ಯ ವಿಷಾದ ವ್ಯಕ್ತಪಡಿಸಿದ್ದು, ಇದರಿಂದ ನೋವಾದವರಿಗೆ ಕ್ಷಮೆಯನ್ನು ಯಾಚಿಸಿದೆ. ಇದು ಕಾನೂನು ವ್ಯಾಪ್ತಿಗೆ ಬರುವ ಕಾರಣ, ಧರ್ಮಪ್ರಾಂತ್ಯ ಕಾನೂನಿಗೆ ತಲೆಬಾಗಿ ಎಲ್ಲ ಪ್ರಕ್ರಿಯೆಗಳಿಗೂ ಸಹಕಾರ ನೀಡಲಿದೆ. ಸತ್ಯಾಸತ್ಯತೆ ಕಂಡುಹಿಡಿಯಲು ಆಂತರಿಕ ವಿಚಾರಣೆಯನ್ನೂ ನಡೆಸುತ್ತೇವೆ. ತತಕ್ಷಣದ ಕ್ರಮವಾಗಿ ಸಂಬಂಧಪಟ್ಟ ಪಾದ್ರಿಯನ್ನು ತೆಗೆದುಹಾಕಲಾಗುವುದು ಮತ್ತು ಬೇರೆಯವರನ್ನು ನಿಯೋಜಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದೆ.