ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುವ ಪೌರಕಾರ್ಮಿಕರ ಮೇಲೆ ಸ್ಥಳೀಯರು, ಸಾರ್ವಜನಿಕರು, ಹಲ್ಲೆ, ಜಾತಿ ನಿಂದನೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಆದೇಶ ಹೊರಡಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುವ ಪೌರಕಾರ್ಮಿಕರ ಮೇಲೆ ಹಲ್ಲೆ, ಜಾತಿ ನಿಂದನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಈ ಆದೇಶ ಪ್ರಕಟಿಸಲಾಗಿದೆ. ಜಾತಿಯ ಹೆಸರಿನಲ್ಲಿ ನಿಂದಿಸುವುದು, ಹಲ್ಲೆ ಮಾಡುವುದು ಕಾನೂನಿನ ಅಡಿ ಶಿಕ್ಷಾರ್ಹ ಅಪರಾಧ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ದೇಶದ ಸಂವಿಧಾನದ 17ನೆ ವಿಧಿಯು ಅಸ್ಪೃಶ್ಯತೆ ನಿಷೇಧಿಸಿದೆ. ಯಾವುದೇ ರೂಪದಲ್ಲಿ ಅದರ ಆಚರಣೆಯು ಅಪರಾಧವಾಗಿದೆ. ನೈರ್ಮಲ್ಯ, ಸ್ವಚ್ಛತಾ ಕಾರ್ಮಿಕರನ್ನು ಗೌರವಿಸುವುದು ಕೇವಲ ನೈತಿಕ ಬಾಧ್ಯತೆಯಾಗಿರದೆ, ಸಮಾಜದ ಅಗತ್ಯವೂ ಹೌದು. ಪ್ರತಿಯೊಬ್ಬ ವ್ಯಕ್ತಿಯೂ ನಿರ್ವಹಿಸುವ ಉದ್ಯೋಗಕ್ಕಿಂತ ವೈಯಕ್ತಿಕ ಘನತೆ ಮತ್ತು ಗೌರವಕ್ಕೆ ಅರ್ಹರಾಗಿರುತ್ತಾರೆ ಎಂದು ಆದೇಶ ತಿಳಿಸಿದೆ.