ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಸಿಎಂ ಆಗಿ ಎಷ್ಟು ವರ್ಷ ಇರುತ್ತಾರೆ ಎಂಬುದನ್ನು ಹೈಕಮಾಂಡ್​ಗೆ ಕೇಳಿ: ಸಚಿವ ಜಾರಕಿಹೊಳಿ

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಜೋರಾಗಿಯೇ ಸದ್ದು ಮಾಡುತ್ತಿದ್ದು, ಈ ಬಗ್ಗೆ ಕಾಂಗ್ರೆಸ್​ ಸಚಿವರಾದ ಸತೀಶ್​ ಜಾರಕಿಹೊಳಿ ಹಾಗೂ ಕೃಷ್ಣ ಬೈರೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.

By ETV Bharat Karnataka Team

Published : 7 hours ago

Updated : 6 hours ago

Minister Satish Jarakiholi
ಸಚಿವ ಸತೀಶ್​ ಜಾರಕಿಹೊಳಿ (ETV Bharat)

ಮೈಸೂರು: "ಸಿದ್ದರಾಮಯ್ಯನವರು ನಮ್ಮ ಮುಖ್ಯಮಂತ್ರಿಗಳು. ಅವರು ಐದು ವರ್ಷ ಅಧಿಕಾರದಲ್ಲಿ ಇರುತ್ತಾರೋ, ಅಥವಾ ಮೂರು ವರ್ಷ ಇರುತ್ತಾರೋ ಎಂಬುದು ನನಗೆ ಗೊತ್ತಿಲ್ಲ. ಅದನ್ನು ನೀವು ಹೈಕಮಾಂಡ್​ ಜೊತೆ ಕೇಳಿ" ಎಂದು ಸಚಿವ ಸತೀಶ್​ ಜಾರಕಿಹೊಳಿ ಹೇಳಿಕೆ ನೀಡಿದರು.

ಮೈಸೂರಿನಲ್ಲಿ ಮಾಧ್ಯಮಗಳ ಸಿಎಂ ಬದಲಾವಣೆ ಪ್ರಶ್ನೆಗೆ ಪ್ರತಿಕ್ರಿಯಿಸಿ, "ನಾನು ಮೈಸೂರಿಗೆ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಿದ್ದೇನೆ. ರಾತ್ರಿಯವರೆಗೆ ಇದ್ದು, ಉಸ್ತುವಾರಿ ಸಚಿವ ಮಹದೇವಪ್ಪ ಅವರ ಜತೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ. ಸಿದ್ದರಾಮಯ್ಯ ಅವರೇ ಸದ್ಯ ಮುಖ್ಯಮಂತ್ರಿ, ಅದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ. ನಾವು ಅವರ ಜತೆ ಸಚಿವರಾಗಿ ಕೆಲಸ ಮಾಡುತ್ತೇವೆ. ಸದ್ಯ ಸಿಎಂ ಬದಲಾವಣೆ ಪ್ರಶ್ನೆ ಉದ್ಭವಿಸುವುದಿಲ್ಲ. ಆ ರೀತಿಯ ಚರ್ಚೆಗಳು ನಡೆದಿಲ್ಲ. ಇದು ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆಯಷ್ಟೇ. ಈ ಪಕ್ಷದವರು ಪ್ರೀತಿಯಿಂದ ನಮ್ಮ ಹೆಸರನ್ನು ಹೇಳುತ್ತಿದ್ದಾರೆ. ಆ ರೀತಿಯ ಬೆಳವಣಿಗೆ ನಡೆದಿಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ" ಎಂದರು.

ಸಚಿವ ಸತೀಶ್​ ಜಾರಕಿಹೊಳಿ (ETV Bharat)

"ನಮ್ಮ ಬೆಂಬಲಿಗರು ಮುಂದಿನ ಸಿಎಂ ಎಂದು ಕಾರ್ಯಕ್ರಮದಲ್ಲಿ ಜೈಕಾರ ಹಾಕಿರುವುದು ಸಾಮಾನ್ಯ. ಅದನ್ನೇ ಇಟ್ಟುಕೊಂಡು ಏನೋ ಬದಲಾವಣೆಯಾಗುತ್ತದೆ ಎಂದು ಹೇಳುವುದು ಸರಿಯಲ್ಲ. ಡಿ.ಕೆ. ಶಿವಕುಮಾರ್‌ ವಿಚಾರದಲ್ಲಿ ನಾನೇನು ಹೇಳುವುದಕ್ಕೆ ಸಾಧ್ಯವಿಲ್ಲ. ರಾಜಕಾರಣಿಗಳು ಸೇರಿದಾಗ ರಾಜಕಾರಣ ಮಾಡುತ್ತಾರೆ. ಉದ್ಯಮಿಗಳು ಸೇರಿದಾಗ ಉದ್ಯಮ ವಿಚಾರವನ್ನ ಚರ್ಚೆ ಮಾಡುವುದು ಸಾಮಾನ್ಯ. ನನ್ನ ಮೇಲೆ ಅಭಿಮಾನವಿಟ್ಟು, ನಮ್ಮ ಅಭಿಮಾನಿಗಳು ಘೋಷಣೆ ಕೂಗುವುದು ಸಾಮಾನ್ಯ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ" ಎಂದರು.

ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ಕೈ ನಾಯಕರ ಬಗ್ಗೆ ಕೃಷ್ಣಬೈರೇಗೌಡ ಹೇಳಿದ್ದೇನು:"ಮುಖ್ಯಮಂತ್ರಿ ಸ್ಥಾನಕ್ಕಾಗಿ ಯಾರ್ಯಾರು ಪ್ರಯತ್ನಿಸುತ್ತಿದ್ದಾರೋ ಅದು ಅವರ ವೈಯಕ್ತಿಕ ವಿಚಾರ. ಪಕ್ಷದ ಹಂತದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ" ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಸಚಿವ ಕೃಷ್ಣ ಬೈರೇಗೌಡ (ETV Bharat)

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೈ ನಾಯಕರು ಭೇಟಿ ಆಗುತ್ತಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಕಿತ್ತೂರಿನಲ್ಲಿ ಪ್ರತಿಕ್ರಿಯಿಸಿದ ಅವರು, "ಅವರವರ ಪ್ರಯತ್ನ, ಆಸೆ. ಅದು ಅವರಿಗೆ ಬಿಟ್ಟಿದ್ದು. ಆದರೆ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್​ ಅವರು ಪಕ್ಷದ ಉನ್ನತ ಮಟ್ಟದಲ್ಲಿದ್ದಾರೆ. ಇವರೆಲ್ಲ ನಾವು ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದೇವೆ ಎಂದು ನಮಗೆ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾಗಿ, ಸಿಎಂ ಬದಲಾವಣೆ ಎನ್ನುವುದು ಕೇವಲ ಊಹೆ ಮತ್ತು ಕಲ್ಪನೆ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಜೊತೆಗಿದೆ. ಇದರಲ್ಲಿ ವೈಯಕ್ತಿಕವಾಗಿ ನನಗೆ ನೂರಕ್ಕೆ ನೂರು ಭರವಸೆ ಇದೆ‌‌" ಎಂದರು.

ಒಳ್ಳೆಯ ಕೆಲಸಗಾರ ಎಂದು ಗುರುತಿಸಿಕೊಂಡಿರುವ ತಮ್ಮ ಹೆಸರು ಸಿಎಂ ರೇಸ್​ನಲ್ಲಿ ಬರಬಹುದಾ? ಎಂಬ ಪ್ರಶ್ನೆಗೆ ಉತ್ತರಿಸಿ, "ಜನ ನನ್ನನ್ನು ಆರು ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಮೂರು ಬಾರಿ ಮಂತ್ರಿಯನ್ನಾಗಿ ಮಾಡಿದೆ. ನನ್ನ ತಂದೆ ತಾಯಿ ಪುಣ್ಯ ನನಗೆ ಸಿಕ್ಕಿದೆ. ಇದಕ್ಕಿಂತ ಇನ್ನೇನು ನನಗೆ ಬೇಕು. ಐದು ವರ್ಷ ಕೃಷಿ ಮಂತ್ರಿಯಾಗಿದ್ದೆ, ಪಂಚಾಯತರಾಜ್ ಇಲಾಖೆ ನಿರ್ವಹಿಸಿದ್ದೇನೆ. ಈಗ ಕಂದಾಯ ಸಚಿವನಾಗಿದ್ದೇನೆ. ಕೈ ತುಂಬಾ ಕೆಲಸ ಇದೆ. ದಿನದ 24 ಗಂಟೆ ಅಲ್ಲ, 48 ಗಂಟೆ ಇದ್ದರೂ ಸಾಕಾಗುವುದಿಲ್ಲ. ಇರುವುದರಲ್ಲಿ ಜನರಿಗೆ ಒಳ್ಳೆಯ ಕೆಲಸ ಮಾಡಿದರೆ ಅದೇ ನನಗೆ ಸೌಭಾಗ್ಯ. ಎಐಸಿಸಿ ಅಧ್ಯಕ್ಷರು, ಸಿಎಂ ಸೇರಿ ಎಲ್ಲರಿಂದ ಒಳ್ಳೆಯ ಗೌರವ ಸಿಕ್ಕಿದೆ. ಏನೆಲ್ಲ ಸಿಗಬೇಕೋ ಅದೆಲ್ಲವೂ ಸಿಕ್ಕಿದೆ. ಹಾಗಾಗಿ, ಏನೋ ಗೊಂದಲ ಎನ್ನುತ್ತಿದ್ದೀರಿ. ಆದರೆ, ನಾನು ಎಲ್ಲ ಕಡೆ ಓಡಾಡಿ ಕೆಲಸ ಮಾಡುತ್ತಿದ್ದೇನೆ" ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ:ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ: ಸತೀಶ್​ ಜಾರಕಿಹೊಳಿ

Last Updated : 6 hours ago

ABOUT THE AUTHOR

...view details