ಹಾವೇರಿ: ಪುನೀತ್ ರಾಜ್‍ಕುಮಾರ್. ಇಹಲೋಕ ತ್ಯಜಿಸಿ ದಿನಗಳುರುಳಿದರೂ ಕನ್ನಡಿಗರ ಹೃದಯದಲ್ಲಿ ಭದ್ರಸ್ಥಾನ ಗಿಟ್ಟಿಸಿಕೊಂಡಿರುವ ಚಂದನವನದ ನಗುಮೊಗದ ಒಡೆಯ. ಅಪ್ಪು ಹೆಸರಿನಲ್ಲಿ ಮಾನವೀಯ ಕಾರ್ಯಗಳು ಮುಂದುವರಿದಿವೆ. ಅಪ್ಪಟ ಅಭಿಮಾನಿಗಳು ಸದಾ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಇದೀಗ ಅಂಥದ್ದೇ ಒಂದು ಸುಂದರ ಕ್ಷಣಕ್ಕೆ ಹಾವೇರಿ ಸಾಕ್ಷಿಯಾಗಿದೆ.
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಯೋರ್ವರು ನಿರ್ಮಿಸಿರುವ 'ಪುನೀತ್ ದೇವಸ್ಥಾನ'ವನ್ನು ಇಂದು ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಉದ್ಘಾಟಿಸಿದ್ದಾರೆ. ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಈ ದೇವಾಲಯವಿದೆ. ಪ್ರಕಾಶ್ ಎಂಬ ಅಪ್ಪು ಅಭಿಮಾನಿಯ ಮನೆಯೆದುರು ಈ ದೇವಸ್ಥಾನ ನಿರ್ಮಿಸಲಾಗಿದೆ.
ಅಭಿಮಾನಿ ಮಗಳ ನಾಮಕರಣ: ಜನಮೆಚ್ಚಿದ ನಟರಿಂದ ತಮ್ಮ ಮಕ್ಕಳ ನಾಮಕರಣ ಮಾಡಿಸಬೇಕೆಂಬುದು ಅದೆಷ್ಟೋ ಅಭಿಮಾನಿಗಳ ಆಶಯ. ಅದರಂತೆ ಅಪ್ಪು ಅಭಿಮಾನಿ ಪ್ರಕಾಶ್ ಮತ್ತು ದೀಪಾ ದಂಪತಿಯ ಮಗಳಿಗೆ 'ಅಪೇಕ್ಷಾ' ಎಂದು ಅಶ್ವಿನಿ ಪುನೀತ್ ರಾಜ್‍ಕುಮಾರ್ ನಾಮಕರಣ ಮಾಡಿದ್ದಾರೆ. ಅಪ್ಪು ಕೆಲಸಗಳನ್ನು ಸದ್ಯ ಅಶ್ವಿನಿಯವರು ನಡೆಸಿಕೊಂಡು ಹೋಗುತ್ತಿದ್ದಾರೆ. ಅದರಂತೆ, ದೇಗುಲ ನಿರ್ಮಿಸಿರುವ ಅಭಿಮಾನಿ ಪ್ರಕಾಶ್ ಪುತ್ರಿ ಮಗಳ ನಾಮಕರಣ ಮಾಡುವ ಮೂಲಕ ಅಶ್ವಿನಿ ತಮ್ಮ ಪತಿಯಂತೆ ಅಭಿಮಾನಿಯ ಕನಸು ನನಸು ಮಾಡಿದ್ದಾರೆ.
ಅಶ್ವಿನಿ ಭಾವುಕ: ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಶ್ವಿನಿ ಪುನೀತ್ ರಾಜ್‍ಕುಮಾರ್, ಅಭಿಮಾನಿಗಳಿಗೆ ನಾನೆಂದಿಗೂ ಚಿರಋಣಿ. ಅಭಿಮಾನಿಯ ಸ್ವಂತ ಜಾಗದಲ್ಲಿ ಅಪ್ಪು ದೇವಸ್ಥಾನ ನಿರ್ಮಾಣಗೊಂಡಿದೆ. ಇಂಥ ಅಭಿಮಾನಿ ಇರುವುದು ನಮ್ಮ ಪುಣ್ಯ. ಅಪ್ಪು ಅವರ ದೇವಸ್ಥಾನ ನಿರ್ಮಾಣಗೊಂಡಿರುವುದು ಬಹಳ ಖುಷಿ ತಂದಿದೆ ಎಂದು ಭಾವುಕರಾದರು.