ಬೆಂಗಳೂರು: ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ಇಂದು ನಿವೃತ್ತಿಯಾಗುತ್ತಿದ್ದು, ಅವರ ಸೇವೆಯನ್ನು ಪರಿಗಣಿಸಿ 'ಕರ್ನಾಟಕ ರತ್ನ ಪ್ರಶಸ್ತಿ' ನೀಡಿ ಅವರನ್ನು ಗೌರವಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.
'ಟ್ರೀಟ್ಮೆಂಟ್ ಫಸ್ಟ್, ಪೇಮೆಂಟ್ ನೆಕ್ಸ್ಟ್' ಎಂಬ ಪರಿಕಲ್ಪನೆಯನ್ನಿಟ್ಟುಕೊಂಡು ಸಾವಿರಾರು ಬಡ ರೋಗಿಗಳಿಗೆ ಚಿಕಿತ್ಸೆ ಕೊಟ್ಟ ಡಾ.ಮಂಜುನಾಥ್ ಅವರು ಬಡವರ ಪಾಲಿನ ಧನ್ವಂತರಿ ಎಂದರೆ ಅತಿಶಯೋಕ್ತಿಯಲ್ಲ. ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವ ಕಾಲದಲ್ಲಿ ಯಾವುದೇ ಖಾಸಗಿ ಕಾರ್ಪೊರೇಟ್ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಬಡವರಿಗೆ ಕೈಗೆಟಕುವ ದರದಲ್ಲಿ ಉತ್ಕೃಷ್ಟ ಆರೋಗ್ಯ ಸೇವೆ ನೀಡುವ ಮಟ್ಟಕ್ಕೆ ಒಂದು ಸರ್ಕಾರಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅನನ್ಯ ಸಾಧನೆ ಮಾಡಿದ ಡಾ.ಸಿ.ಎನ್.ಮಂಜುನಾಥ್ ಕರ್ನಾಟಕದ ಹೆಮ್ಮೆಯ ಸುಪುತ್ರ ಎಂದು ಆರ್.ಅಶೋಕ್ ಬಣ್ಣಿಸಿದ್ದಾರೆ.
"ಡಾ.ಸಿ.ಎನ್.ಮಂಜುನಾಥ್ ಅವರ ಸಾಧನೆ ಗುರುತಿಸಿ, ಗೌರವಿಸಲು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಹನುಮಧ್ವಜ ಇಳಿಸಿದಂತೆ ಕುರ್ಚಿಯಿಂದ ನಿಮ್ಮನ್ನೂ ಇಳಿಸಲಿದ್ದಾರೆ:"ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಇಳಿಸಿದ ಮೇಲೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಈಗ ಧಿಡೀರನೆ ರಾಷ್ಟ್ರಧ್ವಜದ ಮೇಲೆ ಎಲ್ಲಿಲ್ಲದ ಭಕ್ತಿ ಉಕ್ಕಿ ಹರಿಯುತ್ತಿದೆ. 2011ರಲ್ಲಿ ಗಣರಾಜ್ಯೋತ್ಸವದ ದಿನದಂದು ಜಮ್ಮು ಕಾಶ್ಮೀರದ ಶ್ರೀನಗರದ ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜ ಹಾರಿಸಲು ಬಿಜೆಪಿ ಏಕ್ತಾ ಯಾತ್ರೆ ಕೈಗೊಂಡಿದ್ದಾಗ ರಾಷ್ಟ್ರಧ್ವಜ ಹಾರಿಸಲು ಬಿಡದೆ ಬಿಜೆಪಿ ನಾಯಕರನ್ನು ಬಂಧಿಸಿದ್ದು ಇದೇ ಕಾಂಗ್ರೆಸ್ ಪಕ್ಷದ ಸರ್ಕಾರ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಾಡುವುದನ್ನೂ ತಡೆದಿದ್ದು ಕೂಡ ಇದೇ ಕಾಂಗ್ರೆಸ್. ಬೆಂಗಳೂರಿನ ಚಾಮರಾಜಪೇಟೆಯಲ್ಲಿ 75 ವರ್ಷಗಳ ನಂತರ ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡಿದ್ದು ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಾನು ಕಂದಾಯ ಸಚಿವನಾಗಿದ್ದಾಗ" ಎಂದು ಆರ್.ಅಶೋಕ್ ಟೀಕಿಸಿದ್ದಾರೆ.