ಯಾದಗಿರಿ:"ವಕ್ಫ್ ಕ್ಯಾನ್ಸರ್ ಇದ್ದಂತೆ. ಅದು ರೈತರ ಜಮೀನು, ಮಠ-ಮಂದಿರ ಮತ್ತು ಸರ್ಕಾರಿ ಶಾಲೆಗಳನ್ನು ಕಬಳಿಸುತ್ತಿದೆ. ಈ ರೀತಿ ಭೂಮಿ ಕಬಳಿಸುವುದಕ್ಕೆ ಬಿಜೆಪಿ ಬಿಡುವುದಿಲ್ಲ" ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
"ರೈತರ ಜಮೀನುಗಳಲ್ಲಿ ವಿನಾಕಾರಣ ವಕ್ಫ್ ಹೆಸರನ್ನು ಉಲ್ಲೇಖಿಸಲಾಗಿದೆ. ಇದು ಅಕ್ಷಮ್ಯ ಅಪರಾಧ. ರೈತರ ಜಮೀನು ಹೊಡೆಯಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ವಕ್ಫ್ ರೈತರ ಪಾಲಿಗೆ ಕ್ಯಾನ್ಸರ್ ಇದ್ದಂತೆ. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ನೀಡಬೇಕಾಗಿದೆ" ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಗಳು (ETV Bharat) "ಬಸನಗೌಡ ಪಾಟೀಲ್ ಯತ್ನಾಳ ಹೋರಾಟ ಆರಂಭಿಸಿದ್ದಾರೆ. ನಮ್ಮೊಂದಿಗೆ ನೀವೂ ನಿಂತರೆ ನಿಮ್ಮ ಆಸ್ತಿ ಉಳಿಸಿಕೊಡುತ್ತೇವೆ. ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು" ಎಂದು ಹೇಳಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮಾತನಾಡಿ, "ವಕ್ಫ್ ಬೋರ್ಡ್ ಹೆಸರಿನಲ್ಲಿ ರೈತರ ಜಮೀನು, ಮಠ-ಮಂದಿರಗಳು, ಗುಡಿಗಳ ಆಸ್ತಿಯನ್ನೂ ಕಬಳಿಸುವ ಕುತಂತ್ರ ನಡೆದಿದೆ. ಯಾವುದೇ ಕಾರಣಕ್ಕೂ ಆಸ್ತಿ ಕಬಳಿಸಲು ಬಿಡುವುದಿಲ್ಲ. ತಲೆತಲಾಂತರದಿಂದ ಬಂದ ಆಸ್ತಿಗಳನ್ನು ಕಾಂಗ್ರೆಸ್ ಸರ್ಕಾರ ಒಂದು ಸಮುದಾಯದ ಓಲೈಕೆಗಾಗಿ ಕಬಳಿಸುವ ಕುತಂತ್ರ ನಡೆಸುತ್ತಿದೆ" ಎಂದು ಆರೋಪಿಸಿದರು.
"ಕೇವಲ ಗೆಜೆಟ್ ಒಂದೇ ದಾಖಲೆ ಆಗುವುದಿಲ್ಲ. ರಾಜ್ಯದಲ್ಲಿ ವಕ್ಫ್ ಮಂಡಳಿಯು ರೈತರು, ಮಠ, ದೇವಸ್ಥಾನ ಸಾರ್ವಜನಿಕ ಭೂಮಿ, ಸರ್ಕಾರಿ ಭೂಮಿಯನ್ನು ತನ್ನದೆಂದು ಹೇಳಿ ರೈತರಿಗೆ ನೋಟಿಸ್ ಕಳುಹಿಸುತ್ತಿದೆ. ಇದು ಸಂವಿಧಾನದಲ್ಲಿನ ಸಮಾನತೆಯ ತತ್ವಕ್ಕೆ ವಿರುದ್ಧ. ಆದ್ದರಿಂದ ಐತಿಹಾಸಿಕ ಸ್ಥಳಗಳು ಹಾಗೂ ಸ್ವಾತಂತ್ರ್ಯಪೂರ್ವದ ಆಸ್ತಿಗಳನ್ನು ಕಾನೂನುಬಾಹಿರವಾಗಿ ಒತ್ತುವರಿ ಮಾಡಲಾಗುತ್ತಿದೆ. ಹೀಗಾಗಿ ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣಗೊಳಿಸುವಂತೆ ಈಗಾಗಲೇ ಪ್ರಧಾನಮತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೇನೆ" ಎಂದು ತಿಳಿಸಿದರು.
ಇದನ್ನೂ ಓದಿ:ವಕ್ಫ್ ಭೂ ಕಬಳಿಕೆ, ರೇಷನ್ ಕಾರ್ಡ್ ರದ್ದು, ಮತ್ತಿತರ ವಿಷಯಗಳ ಕುರಿತು ಸದನದಲ್ಲಿ ಪ್ರಶ್ನೆ- ಹೋರಾಟ : ಆರ್ ಅಶೋಕ್