ಮೈಸೂರು: ಪ್ರವಾಸೋದ್ಯಮಕ್ಕೆ ಚೇತರಿಕೆ ನೀಡಲು ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಮೈಸೂರಿನ ಮಾನಸ ಗಂಗೋತ್ರಿ ಆವರಣದಲ್ಲಿ ಹಮ್ಮಿಕೊಂಡಿರುವ ಮೈಸೂರು ಫೆಸ್ಟ್ನಲ್ಲಿ ಇಂದಿನ ಚಿತ್ರ ಸಂತೆ ನೋಡುಗರ ಗಮನ ಸೆಳೆಯಿತು. ಕಲಾವಿದರು ತಮ್ಮ ವೈಶಿಷ್ಟ್ಯ ಕಲಾಕೃತಿಗಳ ಮೂಲಕ ಮೆಚ್ಚುಗೆಗೆ ಪಾತ್ರರಾದರು.
ಕೊವಿಡ್ ಸಂದರ್ಭದಲ್ಲಿ ನೆಲಕಚ್ಚಿದ್ದ ಪ್ರವಾಸೋದ್ಯಮ ಈಗ ಚೇತರಿಕೆ ಕಾಣುತ್ತಿದ್ದು, ಈ ಹಿನ್ನೆಲೆ ಮೂರು ದಿನಗಳ ಕಾಲ ಈ ಮೈಸೂರು ಫೆಸ್ಟ್ (ಮೈಸೂರು ಉತ್ಸವ) ಅನ್ನು ಹಮ್ಮಿಕೊಂಡಿದೆ. ಶುಕ್ರವಾರ ಉತ್ಸವಕ್ಕೆ ಚಾಲನೆ ಸಿಕ್ಕಿದ್ದು, ಇಂದು ಮತ್ತು ನಾಳೆ ನಡೆಯಲಿದೆ. ಶನಿವಾರ ಚಿತ್ರ ಸಂತೆ, ಫ್ರಿ ಮಾರ್ಕೆಟ್, ಮೈಸೂರು ಫುಡ್ ಫೆಸ್ಟ್, ಮಾನಸ ಗಂಗೋತ್ರಿ ಬಯಲು ಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ನೋಡುಗರ ಗಮನ ಸೆಳೆಯುತ್ತಿವೆ. ಅದರಲ್ಲೂ ಕ್ಲಾಕ್ ಟವರ್ ಮುಂಭಾಗ ನಡೆದ ಚಿತ್ರ ಸಂತೆಯು ಮೈಸೂರಿಗರ ಮನ ಮುಟ್ಟುವಂತಿತ್ತು.
ಗಮನ ಸೆಳೆದ ವೈಶಿಷ್ಟ್ಯ ಕಲಾಕೃತಿ, ಆಹಾರ ಮೇಳ:ಮಲೆನಾಡಿನ ಚಿತ್ತಾರಗಳು, ಅಡಕೆ ಮರದ ದಬ್ಬೆಯಲ್ಲಿ ಮೂಡಿದ ಅಮೆರಿಕನ್ ಕಾರ್ಟೂನ್, ಪೆನ್ಸಿಲ್ ಕಲಾಕೃತಿಗಳು, ಅಕ್ರೆಲಿಕ್, ಆಯಿಲ್ ಪೇಂಟ್, ವಾಟರ್ ಪೇಂಟ್ಗಳಲ್ಲಿ ಮೂಡಿಬಂದ ಕಲಾಕೃತಿಗಳು, ಪ್ರಕೃತಿ ಸೌಂದರ್ಯ ಬಿಂಬಿಸುವ ಕಲಾಕೃತಿಗಳು, ಮೈಸೂರಿನ ಸಾಂಪ್ರದಾಯಿಕ ಚಿತ್ರಗಳು ಸೇರಿದಂತೆ ದೇಶದ ವಿವಿಧ ಭಾಗದ ಕಲಾಕೃತಿಗಳು ಎಲ್ಲರ ಗಮನ ಸೆಳೆದವು. ಫೆಸ್ಟ್ಗೆ ಆಗಮಿಸಿದ ಭಾಗಶಃ ಜನರು, ತಮ್ಮಿಷ್ಟದ ಕಲಾಕೃತಿಗಳನ್ನು ಕೊಂಡುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದರ ಜೊತೆಗೆ ಕರಕುಶಲಗಳಿಂದ ಮಾಡಲಾಗಿದ್ದ ಅಲಂಕಾರಿಕ ವಸ್ತುಗಳು ಸಹ ಈ ಚಿತ್ರ ಸಂತೆಯಲ್ಲಿ ಕೇಂದ್ರ ಬಿಂದು ಆಗಿದ್ದವು. ಆಹಾರ ಮೇಳ ಕೂಡ ಗಮನ ಸೆಳೆದಿದ್ದು, ಮೇಲುಕೋಟೆಯ ಪುಳಿಯೋಗರೆ, ವಿವಿಧ ರೀತಿಯ ಬಿರಿಯಾನಿಗಳು, ಹಣ್ಣಿನ ರಸ ಸೇರಿದಂತೆ ಹಲವಾರು ಅಹಾರ ಮಳಿಗೆಗಳು ಕೂಡ ಈ ಉತ್ಸವದಲ್ಲಿ ಕಂಡು ಬಂದಿವು. ವಿವಿಧ ಬಗೆಯ ಕಲಾಕೃತಿಗಳು, ಕುಶಲ ಕಲೆಯ ಆಭರಣಗಳು ಸೇರಿದಂತೆ ಹಲವಾರು ರೀತಿಯ ಗಿಡಮೂಲಿಕೆಗಳ ಉತ್ಪನ್ನಗಳು ಕೂಡ ಫ್ರೀ ಮಾರ್ಕೆಟ್ನಲ್ಲಿ ಗಮನ ಸೆಳೆದವು.
ಮೈಸೂರು ಫೆಸ್ಟ್ ಬಗ್ಗೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ, ದಸರಾ ಸಂದರ್ಭದಲ್ಲಿ ಆಯೋಜಿಸಬೇಕಿದ್ದ ಈ ಕಾರ್ಯಕ್ರಮಗಳನ್ನು ಈಗ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗುವಂತೆ ಆಯೋಜನೆ ಮಾಡಲಾಗಿದೆ. ಹೆಚ್ಚು ಹೆಚ್ಚು ಜನ ಭಾಗವಹಿಸುತ್ತಿರುವುದು ಖುಷಿ ನೀಡುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ:ದಕ್ಷಿಣ ಭಾರತದ ಕುಂಭಮೇಳ ಗವಿಮಠ ಜಾತ್ರೆಗೆ ಕ್ಷಣಗಣನೆ; ರಂಗೋಲಿಯಲ್ಲಿ ಮಿಂಚುತ್ತಿದೆ ಕೊಪ್ಪಳ