ಕೊಪ್ಪಳ :ನಗರದ ಬಸ್ ನಿಲ್ದಾಣದ ಹತ್ತಿರ ಪೇಂಟ್ ಅಂಗಡಿಗೆ ಬೆಂಕಿ ಹೊತ್ತಿಕೊಂಡಿರುವ ಪರಿಣಾಮ ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ವಿವಿಧ ವ್ಯಾಪಾರಿ ಮಳಿಗೆಗಳು ಸುಟ್ಟು ಕರಕಲಾದ ಘಟನೆ ಸೋಮವಾರ ಜರುಗಿದೆ. ಜಿಲ್ಲಾ ಅಗ್ನಿಶಾಮಕ ವಾಹನಗಳು ಸೇರಿದಂತೆ ಖಾಸಗಿ ಅಗ್ನಿಶಾಮಕ ವಾಹನಗಳು ಸೇರಿ 8 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ಜರುಗಿತು.
ಸ್ಥಳದಲ್ಲಿಯೇ ಮೊಕ್ಕಾಂ ಹೂಡಿರುವ ಡಿಸಿ ಹಾಗೂ ಎಸ್ಪಿ:ಕೊಪ್ಪಳದ ಹೃದಯ ಭಾಗವಾದ ಬಸ್ ನಿಲ್ದಾಣದ ಎದುರು ಸೋಮವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಈ ಹಿನ್ನೆಲೆ ಕೊಪ್ಪಳ ಡಿಸಿ ನಳಿನ್ ಅತುಲ್ ಮತ್ತು ಎಸ್ಪಿ ಯಶೋದಾ ವಂಟಗೋಡಿ ಮಧ್ಯಾಹ್ನ 3 ಗಂಟೆಯಿಂದ ಬೆಂಕಿ ನಂದಿಸುವವರೆಗೂ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಪೇಂಟ್ ಅಂಗಡಿಯಲ್ಲಿ ಮೊದಲು ಬೆಂಕಿ ಹೊತ್ತಿಕೊಂಡಿದ್ದು, ಮಧ್ಯಾಹ್ನ ಮೂರು ಗಂಟೆಯಿಂದ ಆರು ಗಂಟೆವರೆಗೆ ಬೆಂಕಿ ನಂದಿಸೋ ಕೆಲಸ ಜರುಗಿತು.