ಬೆಂಗಳೂರು:ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳಾ ಕಲಾವಿದರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಕೋರಿ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ನಿಯೋಗ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದೆ. ನಿಯೋಗದ ಮನವಿಗೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.
ಫೈರ್ ನಿಯೋಗದ ಸದಸ್ಯರಾದ ನಟ ಚೇತನ್, ನಟಿ ಶೃತಿ ಹರಿಹರನ್, ನೀತು ಶೆಟ್ಟಿ ಸೇರಿದ ನಿಯೋಗ ಸಿಎಂರನ್ನು ಭೇಟಿಯಾಗಿ, ಕೇರಳದ ನ್ಯಾ.ಹೇಮಾ ಕಮಿಟಿ ಮಾದರಿ ಕರ್ನಾಟದಲ್ಲೂ ಕಮಿಟಿ ರಚಿಸುವಂತೆ ಮನವಿ ಮಾಡಿದ್ದಾರೆ. ಚಿತ್ರರಂಗದಲ್ಲಿನ ಲೈಂಗಿಕ ಶೋಷಣೆ ತಡೆಗಟ್ಟುವ ಸಲುವಾಗಿ ಕಮಿಟಿ ರಚನೆಗೆ ಒತ್ತಾಯಿಸಿದ್ದಾರೆ. ಈಗಾಗಲೇ 153 ಜನ ಸಹಿ ಮಾಡಿರುವ ಪತ್ರ ಸರ್ಕಾರಕ್ಕೆ ತಲುಪಿದ್ದು, ಇಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಕೇರಳದಲ್ಲಿ ಮಾಲಿವುಡ್‌ನ ಹೇಮಾ ಸಮಿತಿ ವರದಿ ದೊಡ್ಡ ಸದ್ದು ಮಾಡಿದೆ. ಮಾಲಿವುಡ್‌ನ ಕಾಸ್ಟಿಂಗ್ ಕೌಚ್ ಪ್ರಕರಣಗಳ ಕರಾಳ ಸತ್ಯಾಂಶವನ್ನು ಸಮಿತಿ ಹೊರಗೆಡವಿದೆ. ಅದೇ ರೀತಿ ಸ್ಯಾಂಡಲ್ವುಡ್ನಲ್ಲೂ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದೆ.