ಶಿವಮೊಗ್ಗ: "ನನಗೆ ಕೆ.ಎಸ್. ಈಶ್ವರಪ್ಪ ಅವರ ಬಗ್ಗೆ ಗೌರವವಿದೆ. ಅವರಿಗೆ ಸಲಹೆ ನೀಡುವಷ್ಟು ನಾನು ದೊಡ್ಡವನಲ್ಲ" ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.
ಶಿವಮೊಗ್ಗದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಈ ಬಾರಿ ನಾವೆಲ್ಲರೂ ಸ್ಪಷ್ಟವಾಗಿದ್ದೇವೆ. ಇದು ಮೋದಿ ಚುನಾವಣೆ. ಶಿವಮೊಗ್ಗದಲ್ಲಿ ಎಂಎಲ್ಎ ಯಾರು, ಎಂಎಲ್ಸಿ ಯಾರು, ಕಾರ್ಪೋರೇಟರ್ ಯಾರು ಎಂಬ ಚುನಾವಣೆ ಇದು ಅಲ್ಲ. ಈ ಬಾರಿಯ ಚುನಾವಣೆಯಲ್ಲಿ ಎಲ್ಲ ಮತಗಳು ಮೋದಿ ಅವರಿಗೆ ಹೋಗಬೇಕು. ಯಾಕೆಂದರೆ ಮೋದಿ 10 ವರ್ಷ ಕಷ್ಟಪಟ್ಟಿದ್ದಾರೆ, ದೇಶಕ್ಕಾಗಿ ದುಡಿದಿದ್ದಾರೆ. ಹೀಗಾಗಿ ಜನತೆ ಈ ಬಾರಿ ಮೋದಿಗೆ ಹಾಕುವ ವೋಟು ಧನ್ಯವಾದ ಹೇಳುವ ವೋಟು ಎಂದು ಭಾವಿಸಿದ್ದಾರೆ‘‘ ಎಂದರು.
ಆದರೆ ಇಲ್ಲಿ ಸಮಸ್ಯೆ ಎಂದರೆ, ಜನರು ನನಗೆ ಮೋದಿಜಿ ಇಷ್ಟ, ಆದರೆ ಲೋಕಲ್ ಬಿಜೆಪಿ ಇಷ್ಟ ಇಲ್ಲ. ಹಾಗಾಗಿ ನಾನು ಪಕ್ಷೇತರ ನಿಲ್ಲುತ್ತೇನೆ ಎನ್ನುತ್ತಾರೆ. ಆದರೆ ಇದು ರಾಷ್ಟ್ರಮಟ್ಟದ ಚುನಾವಣೆ. ನೀವಿಲ್ಲಿ ಬಿಜೆಪಿ ಎಂಪಿಗಳಿಗೆ ಮತ ಹಾಕಿದರೆ ನರೇಂದ್ರ ಮೋದಿ ಮತ್ತೆ ಗೆಲ್ಲುತ್ತಾರೆ. ಹಾಗಾಗಿ ನಾನು ವಿನಂತಿಸಿಕೊಳ್ಳುವುದು ಏನೆಂದರೆ, ‘ಕೆಎಸ್ ಈಶ್ವರಪ್ಪ ಅವರಿಗೆ ಸಲಹೆ ನೀಡುವಷ್ಟು ನಾನು ದೊಡ್ಡನಲ್ಲ. ನಾನು ಪಕ್ಷದಲ್ಲಿ ತುಂಬಾ ಸಣ್ಣ ವ್ಯಕ್ತಿ'. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇದೇ ರೀತಿಯಾಗಿತ್ತು. ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರವಾಗಿ ನಿಂತಿದ್ದರು. ಆದರೆ ಈಗ ಮತ್ತೆ ಪಕ್ಷ ಸೇರಿದ್ದಾರೆ ಎಂದರು ನೆನಪು ಮಾಡಿಕೊಂಡರು.
ಅರುಣ್ ಕುಮಾರ್ ಪುತ್ತಿಲ ಅವರನ್ನು ಸಮಧಾನಗೊಳಿಸುವ ಸಂದರ್ಭದಲ್ಲಿ ನಾನು ಅವರಿಗೆ ಹೇಳಿದ್ದೆ. ಪಕ್ಷದ ಒಳಗೆ ಸಣ್ಣ-ಪುಟ್ಟ ಅಸಮಾಧಾನ ಇರಬಹುದು. ಆದರೆ ಇದೇ ವಿಚಾರವನ್ನು ನಾವು ಇಟ್ಟುಕೊಂಡು ಪಕ್ಷೇತರರಾಗಿ ನಿಂತರೆ, ಪರಿಣಾಮ ಬೀರುವುದು ಪ್ರಧಾನಿ ನರೇಂದ್ರ ಮೋದಿ ಮೇಲೆ. ನಾನು ಹೇಳುವುದು ಇಷ್ಟೇ, ಚುನಾವಣೆ ಬಳಿಕ ಪರಿಸ್ಥಿತಿ ಬೇರೆ ಆಗಿರುತ್ತದೆ, ಆಗ ಪಾರ್ಟಿಗೆ ಮತ್ತೆ ಬರಬಹುದು. ಆದರೆ ಇದು ಚುನಾವಣಾ ಸಮಯ. ಈಗ ನಾವು ಬಹಳ ಸ್ಪಷ್ಟವಾಗಿ ಇರಬೇಕು. ಶಿವಮೊಗ್ಗದ ಜನತೆ ಚುನಾವಣಾ ಅಭ್ಯರ್ಥಿ ರಾಘವೇಂದ್ರ ಯಡಿಯೂರಪ್ಪ ಅವರಿಗೆ ಮತ ಹಾಕುವ ಮೂಲಕ ಆ ಮತ ಮೋದಿಗೆ ತಲುಪಬೇಕು ಎಂಬ ಸ್ಪಷ್ಟತೆಯಲ್ಲಿ ಇದ್ದಾರೆ ಎಂದರು.
ಬಿ.ವೈ. ರಾಘವೇಂದ್ರ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತಾರೆ: ರಾಘವೇಂದ್ರ ಅವರ ಪರ ನಿನ್ನೆ ಪ್ರಚಾರ ಮಾಡಿದ್ದೇನೆ. ಈ ಬಾರಿ ಹೆಚ್ಚಿನ ಅಂತರದಲ್ಲಿ ಅವರು ಗೆಲ್ಲುತ್ತಾರೆ. ಎನ್‌ಡಿಎ ಒಕ್ಕೂಟ ಈ ಬಾರಿ ಜಾಸ್ತಿ ಸೀಟು ಗೆಲ್ಲುತ್ತದೆ. ಪ್ರಧಾನಿಗಳ ವಿರುದ್ಧ ಕರ್ನಾಟಕ ಮುಖಂಡರು ಮಾತನಾಡುತ್ತಿದ್ದಾರೆ. ಇದನ್ನೆಲ್ಲವನ್ನು ಜನ ಗಮನಿಸುತ್ತಿದ್ದಾರೆ. ಕರ್ನಾಟಕದಲ್ಲಿ ಈ ಬಾರಿ 28ಕ್ಕೆ 28 ಕ್ಷೇತ್ರ ಗೆಲ್ಲುತ್ತೇವೆ. ಕೇರಳದಲ್ಲಿ ಈ ಬಾರಿ ಬಿಜೆಪಿ ಅಕೌಂಟ್ ಓಪನ್ ಮಾಡುತ್ತದೆ. ಕರ್ನಾಟಕದ ರಾಜ್ಯ ಕಾಂಗ್ರೆಸ್ ಸಕಾರ್ರದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಯುತ್ತಿದ್ದು, ಕಾನೂನು ಸುವ್ಯಸ್ಥೆ ಹದಗೆಟ್ಟಿದೆ ಎಂದು ಅಣ್ಣಾಮಲೈ ಹೇಳಿದರು.
ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಕ್ಲೀನ್ ಸ್ವೀಪ್:ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ. ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಪ್ರೀತಿ ತೋರಿದ್ದಾರೆ. 2014 ಮತ್ತು 2019 ರಲ್ಲಿ ಜನರು ಮೋದಿ ಮೇಲೆ ಪ್ರೀತಿ ತೋರಿದ್ದಾರೆ. ಅದೇ ರೀತಿ ಈ ಬಾರಿಯು ಕರ್ನಾಟಕ ದಲ್ಲಿ ಕ್ಲೀನ್ ಸ್ವೀಪ್ ಆಗುತ್ತದೆ. ಜನ ಬುದ್ಧಿವಂತರಿದ್ದಾರೆ. ಯಾರು ಪ್ರಧಾನಿ ಆಗಬೇಕೆಂದು ಜನ ತೀರ್ಮಾನ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಜಾಹೀರಾತು ವಿಚಾರ: "ನಮ್ಮ ಹತ್ತಿರ ದುಡ್ಡು ಇದೆ, ಜಾಹೀರಾತು ಕೊಟ್ಟಿದ್ದೇವೆ ಅನ್ನುವುದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತೋರಿಸುತ್ತಿದೆ. ಪ್ರಧಾನಿ ಬಗ್ಗೆ ಚೊಂಬು ತೋರಿಸುವುದು ಸರಿಯಲ್ಲ. ಭಾರತ ಪ್ರಧಾನಿ ಪ್ರಪಂಚದ ನಾಯಕರಾಗಿ ಕೆಲಸ ಮಾಡಬೇಕು. ಬಿಜೆಪಿ ಬಗ್ಗೆ ಟೀಕೆ ಮಾಡುವವರಿಗೆ ಜೂನ್ 4 ರಂದು ಗೊತ್ತಾಗಲಿದೆ ಎಂದು ಟಾಂಗ್ ನೀಡಿದರು.
ಬರ ಪರಿಹಾರ ವಿಚಾರ:2004 ರಿಂದ 2014ರ ತನಕ ಆಗಿನ ಸರ್ಕಾರ 19,500 ಸಾವಿರ ಕೋಟಿ ಪರಿಹಾರ ಕೇಳಿತ್ತು. ಆಗ ಕಾಂಗ್ರೆಸ್ ಸರ್ಕಾರ ಕೊಟ್ಟಿದ್ದು 1500 ಕೋಟಿ ರೂಪಾಯಿ ಅಷ್ಟೇ. ಇದೀಗ ಎನ್‌ಡಿಎ ಸರ್ಕಾರ ಶೇ 38 ರಷ್ಟು ಪರಿಹಾರ ಕೊಟ್ಟಿದೆ. ಪರಿಹಾರಕ್ಕಾಗಿ ಹಾಲಿ ರಾಜ್ಯ ಸರ್ಕಾರ ದೆಹಲಿ, ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿತು. ಅವರು ಮೊದಲು ಕಾಂಗ್ರೆಸ್ ಅವರು ಮನಮೋಹನ್ ಸಿಂಗ್ ಇದ್ದಾಗ ಏನು ಕೊಟ್ಟಿದ್ದಾರೆ ಹೇಳಲಿ ಎಂದು ಮರು ಸವಾಲು ಹಾಕಿದರು.
ಇದನ್ನೂ ಓದಿ:ಇಂಡಿಯಾ ಮೈತ್ರಿಕೂಟದಲ್ಲಿ ಈಗ ಕೌನ್ ಬನೇಗಾ ಪ್ರಧಾನಮಂತ್ರಿ ಎಂಬಂತಾಗಿದೆ: ಅಣ್ಣಾಮಲೈ - Annamalai