ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಹೇಳಿಕೆ ಧಾರವಾಡ:ಹುಬ್ಬಳ್ಳಿಯಲ್ಲಿ ಯುವತಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ನಾಳೆ ಅಂಜುಮನ್ ಇಸ್ಲಾಂ ಸಂಸ್ಥೆಯಿಂದ ಸ್ವಯಂಪ್ರೇರಿತ ಧಾರವಾಡ ಬಂದ್‌ಗೆ ಕರೆ ನೀಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಹೇಳಿದರು. ಅಲ್ಲದೆ, ಅಂಜುಮನ್ ಕಾಲೇಜಿನ ಕೊಠಡಿಗೆ ನೇಹಾಳ ಹೆಸರಿಡಲು ಸಂಸ್ಥೆ ತೀರ್ಮಾನ ಮಾಡಲಾಗಿದೆ. ಹತ್ಯೆ ಖಂಡಿಸಿ ಆಕೆಯ ಹೆಸರನ್ನು ಸಂಸ್ಥೆಯ ಒಂದು ಕೊಠಡಿಗೆ ಇಡುತ್ತೇವೆ. ಅವರ ತಂದೆ ತಾಯಿಯಿಂದಲೇ ಉದ್ಘಾಟನೆ ಮಾಡಸ್ತೇವೆ ಎಂದು ಅವರು ತಿಳಿಸಿದರು.
ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪರಾಧಗಳು ಆಗುತ್ತಿರುತ್ತವೆ. ನಮ್ಮ ಸಂಸ್ಥೆಯ ಪ್ರಕಾರ ವಿದ್ಯಾರ್ಥಿನಿಗೆ ಯಾವುದೇ ಜಾತಿ ಇಲ್ಲ. ನಮ್ಮ ಸಂಸ್ಥೆಯ ವಿದ್ಯಾರ್ಥಿನಿಯೇ ಪ್ರಾಣ ಕಳೆದುಕೊಂಡ ನೋವಾಗಿದೆ. ಇಂತಹ ಘಟನೆಗಳು ಯಾವುದೇ ವಿದ್ಯಾಸಂಸ್ಥೆಗಳಲ್ಲಿ ಆಗಬಾರದು. ಈ ರೀತಿಯ ಘಟನೆಗಳಿಂದ ವಿದ್ಯಾಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಪೋಷಕರು ಹೆದರುತ್ತಾರೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಇಂಥ ಪ್ರಕರಣಗಳಲ್ಲಿ ಶೀಘ್ರ ಶಿಕ್ಷೆಯಾಗಬೇಕು. ಆಗ ಮಾತ್ರ ಘಟನೆಗಳನ್ನು ತಡೆಯಲು ಸಾಧ್ಯ ಎಂದರು.
ನಾಳೆ ಧಾರವಾಡ ಜಿಲ್ಲೆಯಲ್ಲಿ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಆಗಲಿವೆ. ಬೆಳಗ್ಗೆ 10 ರಿಂದ ಅಂಜುಮನ್ ಸಂಸ್ಥೆಯಿಂದ ಮೌನ ಮೆರವಣಿಗೆ ನಡೆಸಿ ಮಧ್ಯಾಹ್ನ 3 ಗಂಟೆಯವರೆಗೆ ಬಂದ್‌ಗೆ ಕರೆ ಕೊಟ್ಟಿದ್ದೇವೆ. ಅಂಜುಮನ್ ಸಂಸ್ಥೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೌನ ಮೆರವಣಿಗೆ ಮಾಡುತ್ತೇವೆ. ಜಸ್ಟಿಸ್ ಫಾರ್ ನೇಹಾ ಎಂದು ಅಂಗಡಿಗಳಿಗೆ ಭಿತ್ತಿಪತ್ರ ಅಂಟಿಸಲಾಗುವುದು. ಮುಸ್ಲಿಂ ಸಮುದಾಯದ ಅಂಗಡಿಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಬಂದ್ ಆಗಿರುತ್ತವೆ ಎಂದು ತಿಳಿಸಿದರು.
ನಮ್ಮ ಸಂಸ್ಥೆಯಿಂದ ಸಮಗ್ರ ಬಂದ್‌ಗೆ ಕರೆ ನೀಡಲು ಅವಕಾಶ ಇಲ್ಲ. ಹೀಗಾಗಿ ನಮ್ಮ ಸಮುದಾಯದವರಿಗೆ ಮಾತ್ರ ಕರೆ ನೀಡಿದ್ದೇವೆ. ಒತ್ತಾಯಪೂರ್ವಕವಾಗಿ ಬಂದ್ ಮಾಡಲು ಹೇಳಿಲ್ಲ. ಸ್ವಯಂಪ್ರೇರಿತ ಬಂದ್ ಮಾಡುತ್ತಿದ್ದೇವೆ. ವಿದ್ಯಾರ್ಥಿನಿಯರ ಸ್ವಯಂ ರಕ್ಷಣೆ ಸಂಬಂಧ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಸಂಸ್ಥೆಯ ಶಾಲಾ-ಕಾಲೇಜುಗಳಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರವೇಶದ ಸಮಯದಲ್ಲಿಯೇ ಹುಡುಗರ ಪಾಲಕರ ಕಡೆಯಿಂದ ಪತ್ರ ಬರೆಯಿಸಿಕೊಳ್ಳುತ್ತೇವೆ. ಧಾರವಾಡದಲ್ಲಿ ಗಾಂಜಾದಂತಹ ನಶೆ ಹೊಡೆಯುವ ಸ್ಪಾಟ್‌ಗಳಿವೆ. ಅದು ನಮಗೆಲ್ಲ ಗೊತ್ತು. ಆದರೂ ಅದನ್ನು ತಡೆಯಲು ಆಗುತ್ತಿಲ್ಲ. ಈ ಬಗ್ಗೆ ನಮಗೆ ಬೇಸರ ಇದೆ. ಸರ್ಕಾರ ಕ್ರಮ ಕೈಗೊಳ್ಳಬೇಕು. ಮುಂದೆ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಧಾರವಾಡದಲ್ಲಿ ಅನೇಕ ವಿದ್ಯಾ ಸಂಸ್ಥೆಗಳನ್ನು ಹೊಂದಿರುವ ಅಂಜುಮನ್ ಸಂಸ್ಥೆ ಎಲ್ಲ ಸಮುದಾಯದ ವಿದ್ಯಾರ್ಥಿನಿಯರು ಬರುವ ಸಂಸ್ಥೆ. ಈ ಹಿನ್ನೆಲೆಯಲ್ಲಿ ಅನುಚಿತ ವರ್ತನೆ ತೋರುವ ವಿದ್ಯಾರ್ಥಿಗಳ ಮೇಲೆ ಕ್ರಮಕ್ಕೆ ನಿರ್ಧಾರ ಕೈಗೊಳ್ಳುತ್ತೇವೆ. ವಿದ್ಯಾರ್ಥಿಗಳ ಪೋಷಕರಿಂದ ಯಾವುದೇ ಕ್ರಮ ಕೈಗೊಳ್ಳಬಹುದೆಂಬ ಒಪ್ಪಿಗೆ ಪತ್ರ ತೆಗೆದುಕೊಳ್ಳಲು, ಅನುಚಿತ ವರ್ತನೆ ತೋರುವ ವಿದ್ಯಾರ್ಥಿ ಮೇಲೆ ಕಣ್ಣೀಡಲು, ಪ್ರತ್ಯೇಕ ಸೆಲ್ ಮಾಡಲು ನಿರ್ಧಾರ ಮಾಡಲಾಗಿದೆ. ಮಹಿಳಾ ಸುರಕ್ಷತಾ ಸೆಲ್ ಮಾಡಲು ತೀರ್ಮಾನ ಮಾಡಲಾಗಿದ್ದು, ಈ ಸಮಿತಿಯಿಂದ ವಿದ್ಯಾರ್ಥಿನಿಯರ ಸುರಕ್ಷತೆ ಮೇಲೆ ನಿಗಾವಹಿಸಲಾಗುವುದು. ಸುರಕ್ಷತೆಗೆ ಧಕ್ಕೆ ತರುವ ವಿದ್ಯಾರ್ಥಿ ಬಗ್ಗೆ ಕಣ್ಣಿಡಲಿರುವ ಸಮಿತಿ ವರದಿ ಆಧರಿಸಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ:ರಾಯಚೂರು: ಮಗಳಿಗೆ ರಕ್ಷಣೆ ನೀಡಿದ ಪೋಷಕರು, ಸಂಬಂಧಿಕರ ಮೇಲೆ ಹಲ್ಲೆ - Attack On Parents