ಗಂಗಾವತಿ (ಕೊಪ್ಪಳ):ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಅಂಜನಾದ್ರಿ ದೇಗುಲದ ಕಾಣಿಕೆಯ ಪೆಟ್ಟಿಗೆಯಲ್ಲಿನ ಹುಂಡಿ ಎಣಿಕೆ ಕಾರ್ಯ ಸೋಮವಾರ ನಡೆದಿದ್ದು, ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ.
ಕಳೆದ ನವಂಬರ್ನಲ್ಲಿ ನಡೆದ ಹುಂಡಿ ಎಣಿಕೆಯ ಸಂದರ್ಭದಲ್ಲಿ ಸಂಗ್ರಹವಾಗಿದ್ದ 36 ಲಕ್ಷ ರೂಪಾಯಿ ಇದುವರೆಗಿನ ದಾಖಲೆಯಾಗಿತ್ತು. ಆದರೆ ಈ ಬಾರಿ ಎಲ್ಲಾ ದಾಖಲೆ ಮುರಿದು ಬರೋಬ್ಬರಿ ಅರ್ಧ ಕೋಟಿ ಅಂದರೆ ರೂ. 61.64 ಲಕ್ಷ ಮೊತ್ತದ ನಗದು ಸಂಗ್ರಹವಾಗಿದೆ.
ಅಂಜನಾದ್ರಿ ದೇಗುಲದಲ್ಲಿ ಹುಂಡಿ ಎಣಿಕೆ ನಡೆಯಿತು (ETV Bharat) ದೇಗುಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಹೆಚ್ ಪ್ರಕಾಶ್ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಆರಂಭವಾದ ಹುಂಡಿ ಎಣಿಕೆ ಕಾರ್ಯ ಸಂಜೆ ಏಳು ಗಂಟೆಗೆ ಮುಗಿಯಿತು. ಸತತ ಎಂಟು ಗಂಟೆಗೂ ಹೆಚ್ಚು ಕಾಲ ಕಂದಾಯ ಇಲಾಖೆ, ದೇಗುಲ ಸಮಿತಿ ಸಿಬ್ಬಂದಿ ಸೇರಿ ಸುಮಾರು 40ಕ್ಕೂ ಹೆಚ್ಚು ಸಿಬ್ಬಂದಿ ಹಣ ಎಣಿಕೆ ಮಾಡಿದರು.
ಹುಂಡಿ ಎಣಿಕೆಯ ಸಂದರ್ಭದಲ್ಲಿ ಅಮೆರಿಕದ ತಲಾ ಒಂದು ಡಾಲರ್ ಮೌಲ್ಯದ ಎರಡು ಡಾಲರ್, ಸೌದಿ ಅರೆಬಿಯಾದ ಐದು ರಿಯಾದ್, ನೇಪಾಳದ 20 ರೂಪಾಯಿ ಮುಖ ಬೆಲೆಯ ಎರಡು ಹಾಗೂ ಐದು ರೂಪಾಯಿ ಮುಖ ಬೆಲೆಯ ಐದು ನೋಟುಗಳು ಪತ್ತೆಯಾಗಿವೆ.
ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗಿದ ಸಿಬ್ಬಂದಿ (ETV Bharat) ಹನುಮನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಹನುಮಮಾಲೆ ವಿಸರ್ಜನೆ, ಹೊಸ ವರ್ಷ, ಸಂಕ್ರಮಣದಂತಹ ವಿಶೇಷ ದಿನಗಳು ಸಾಲು ಸಾಲಾಗಿ ಬಂದ ಹಿನ್ನೆಲೆ ಹುಂಡಿ ಹಣದಲ್ಲಿ ಏರಿಕೆಯಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಇದನ್ನೂ ಓದಿ :ನಂಜುಂಡೇಶ್ವರನಿಗೆ ಒಂದು ತಿಂಗಳಲ್ಲಿ 1.23 ಕೋಟಿ ರೂಪಾಯಿ ಕಾಣಿಕೆ: ಹುಂಡಿಯಲ್ಲಿ ಸಿಕ್ತು ಅಮೆರಿಕ, ಇಂಗ್ಲೆಂಡ್ ದೇಶಗಳ ಕರೆನ್ಸಿ - NANJUNDESHWARA HUNDI COUNTING