ದಾವಣಗೆರೆ: ಹುಬ್ಬಳಿಯ ಅಂಜಲಿಯನ್ನು ಕೊಲೆ ಮಾಡಿದ ಆರೋಪಿ ವಿಶ್ವನಾಥ ಅಲಿಯಾಸ್ ಗಿರೀಶ್ ದಾವಣಗೆರೆಯ ಮತ್ತೊಬ್ಬ ಮಹಿಳೆಗೆ ಚಾಕು ಇರಿದಿರುವ ಆರೋಪ ಕೇಳಿ ಬಂದಿದೆ. ಆ ಮಹಿಳೆ ಇದೀಗ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ರೈಲ್ವೆ ನಿಲ್ದಾಣದ ಬಳಿ ಚಾಕು ಇರಿದಿದ್ದು, ಇರಿತಕ್ಕೊಳಗಾದ ಮಹಿಳೆ ಲಕ್ಷ್ಮಿ ಇದೀಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯ ಪತಿ ಮಹಾಂತೇಶನು ಆರೋಪಿಯ ಕೃತ್ಯಕ್ಕೆ ಕಿಡಿ ಕಾರಿದ್ದು, ಘಟನೆ ಕುರಿತು ಮತ್ತಷ್ಟು ವಿವರಣೆ ನೀಡಿದ್ದಾರೆ.
ಈಟಿವಿ ಭಾರತದ ಜೊತೆಗೆ ಮಾತನಾಡಿದ ಅವರು, ಚಲಿಸುವ ರೈಲಿನಲ್ಲಿ ಪತ್ನಿ ಲಕ್ಷ್ಮಿ ಶೌಚಾಲಯಕ್ಕೆ ತೆರಳಿದಾಗ ಹಿಂಬಾಲಿಸಿಕೊಂಡು ಹೋದ ವಿಶ್ವನಾಥ ಹೊರಬರುವಂತೆ ಬಾಗಿಲು ಬಡಿದ. ಹೊರ ಬರುತ್ತಿದ್ದಂತೆ ಆರೋಪಿ ಲಕ್ಷ್ಮಿಗೆ ಚಾಕು ಚುಚ್ಚಿದ್ದಾನೆ. ಹೊಟ್ಟೆ ಭಾಗಕ್ಕೆ ಚುಚ್ಚುವುದರಿಂದ ಮಹಿಳೆ ತಪ್ಪಿಸಿಕೊಂಡಿದ್ದರಿಂದ ಕೈಗೆ ಚೂರಿಯ ತಿವಿತದಿಂದ ಗಾಯವಾಗಿದೆ. ಪತ್ನಿ ತಕ್ಷಣ ಚೀರಿಕೊಂಡಿದ್ದರಿಂದ ಆರೋಪಿ ವಿಶ್ವನಾಥ ಪರಾರಿಯಾಗಿದ್ದ. ಮೂಲತಃ ನಾನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮುಳುಗುಂದ ನಿವಾಸಿಯಾಗಿದ್ದು, ಪುತ್ರನನ್ನು ತುಮಕೂರಿನ ಸಿದ್ದಗಂಗಾ ಶಾಲೆಗೆ ಸೇರಿಸಿ ಕುಟುಂಬ ಸಹಿತ ವಾಪಸ್ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ನಡೆದ ಘಟನೆ ಕುರಿತು ಕಣ್ಣೀರು ಸುರಿಸುತ್ತಾ ವಿವರಣೆ ನೀಡಿದರು.