ಮಂಗಳೂರು : ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ಗಂಗರಾಜು ಅವರಿಗೆ ಬಲ ತುಂಬುವ ಉದ್ದೇಶದಿಂದ ಕುರಿಗಳನ್ನು ಬಲಿ ನೀಡಲಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದ ವಿಡಿಯೋ ಇತ್ತೀಚೆಗೆ ಬಂಧನವಾಗಿರುವ ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಮೊಬೈಲ್‌ನಲ್ಲಿತ್ತು ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ.
ಇತ್ತೀಚೆಗೆ ಮಸಾಜ್ ಪಾರ್ಲರ್ಗೆ ದಾಳಿ ಮಾಡಿ ದಾಂಧಲೆ ಮಾಡಿರುವ ಹಿನ್ನೆಲೆ ಪ್ರಸಾದ್ ಅತ್ತಾವರ ಬಂಧನವಾಗಿತ್ತು. ಈ ವೇಳೆ ಆತನ ಮೊಬೈಲ್ ಪರಿಶೀಲನೆ ಮಾಡಿದ್ದೇವೆ. ವಾಟ್ಸ್ಆ್ಯಪ್ನಲ್ಲಿ ಪ್ರಸಾದ್ ಹಾಗೂ ಅನಂತ್ಭಟ್ ಎಂಬುವವರ ನಡುವೆ ಚರ್ಚೆ ನಡೆಯುತ್ತಿತ್ತು. ಅದರಲ್ಲಿ ಒಂದು ವಿಡಿಯೋ ಇತ್ತು. ದೇವಸ್ಥಾನವೊಂದರಲ್ಲಿ ಕುರಿಗಳನ್ನು ಬಲಿಕೊಡುವ ದೃಶ್ಯ ಪತ್ತೆಯಾಗಿದೆ ಎಂದರು.
ಅವರಿಬ್ಬರ ನಡುವೆ ನಡೆದಿರುವ ಸಂವಹನದ ಮಾಹಿತಿ ಮೊಬೈಲ್ನಿಂದ ಲಭ್ಯವಾಗಿದೆ. ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜುಗೆ ಈ ಬಲಿ ಮೂಲಕ ಅವರ ಹೋರಾಟಕ್ಕೆ ಬಲ ಸಿಗಲಿ ಎಂದು ಚೀಟಿಯ ಮೇಲೆ ಐವರ ಹೆಸರು ಬರೆದು, ಒಂದು ಪ್ರತಿಮೆ ಮೇಲೆ ಅವರಿಬ್ಬರ ಫೋಟೋ ಇಟ್ಟು, ಕುರಿಗಳನ್ನ ಬಲಿ ಕೊಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ಅವರು ಹೇಳಿದರು.
ಪ್ರಸಾದ್ ಅತ್ತಾವರ ಮತ್ತು ಅನಂತ್ ಭಟ್ ಎಂಬವರ ನಡುವೆ ವಾಮಾಚಾರ ಮಾಡುವ ಬಗ್ಗೆ ಹಲವು ವಾಟ್ಸ್ಆ್ಯಪ್ ಸಂದೇಶಗಳು ಹಾಗೂ ಫೋಟೋಗಳು ಕಂಡುಬಂದಿವೆ. ಈ ಬಗ್ಗೆ ಅನಂತ್ ಭಟ್ ಹಲವು ವಿಡಿಯೋ ಹಾಗೂ ಫೋಟೋಗಳನ್ನು ಪ್ರಸಾದ್ ಅತ್ತಾವರ ಅವರಿಗೆ ಕಳಿಸಿದ್ದಾರೆ. ಜೊತೆಗೆ, ಅನಂತ್ ಭಟ್ ಅವರಿಗೆ ಪ್ರಸಾದ್ ಅತ್ತಾವರ ಅವರು ಹಣ ವರ್ಗಾವಣೆ ಮಾಡಿರುವ ಬಗ್ಗೆಯೂ ಫೋಟೋ ಲಭ್ಯವಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.