ಆನೇಕಲ್: ಬೆಂಗಳೂರಿನ ಹೊರವಲಯಕ್ಕೆ ಅಂಟಿಕೊಂಡಿರುವ ತಮಿಳುನಾಡಿನ ಗುಮ್ಮಳಾಪುರವು ಶಿವನ ಪತ್ನಿ ಗೌರಿಯ ತವರೂರೆಂದೇ ಪ್ರಖ್ಯಾತಿ. ಶುಕ್ರವಾರ ಗೌರಿ-ಗಣೇಶನನ್ನು ಶೆಟ್ಟರ ಕೆರೆಯಲ್ಲಿ ಜಲಾಧಿವಾಸ ಮಾಡುವ ಮೂಲಕ ಶಿವನ ಕೈಲಾಸಕ್ಕೆ ಕಳಿಸಿಕೊಡುವ ಗುಮ್ಮಳಾಪುರ ಜಾತ್ರೆ ನಡೆಯಿತು.
ಎತ್ತರದ ಬಿದುರಿನ ಎರಡು ತೇರುಗಳಲ್ಲಿ ಒಂದರಲ್ಲಿ ಗಣೇಶ ಮತ್ತೊಂದರಲ್ಲಿ ಗೌರಿಯನ್ನು ಕುಳ್ಳಿರಿಸಿ ಹತ್ತಾರು ಯುವಕರು ಹುರುಪಿನಿಂದ ಗೌರಿ ಗುಡಿಯಿಂದ ಶೆಟ್ಟರ ಕೆರೆಗೆ ಹೊತ್ತೊಯ್ಯುವುದನ್ನು ನೋಡುವುದೇ ಕಣ್ಣಿಗೆ ಆನಂದ. ವರ್ಷಕ್ಕೊಮ್ಮೆ ತೆರೆಯುವ ಈ ಗುಡಿಯು ಒಂದು ತಿಂಗಳವರೆಗೆ ತೆರೆದಿರುತ್ತದೆ. ಆ ಒಂದು ತಿಂಗಳಲ್ಲಿ ಗೌರಿಗೆ ಮರುಳು ತುಂಬಿ ತಮ್ಮ ಹರಕೆಗಳನ್ನು ತೀರಿಸಿಕೊಳ್ಳುವ ಮುತ್ತೈದೆಯರು ತಿಂಗಳ ಕೊನೆವರೆಗೆ ತವರಲ್ಲೆ ಉಳಿಯುವ ಪರಿಪಾಠ ಸುತ್ತಲ ಗ್ರಾಮಸ್ಥರಲ್ಲಿದೆ.
ತಮಿಳುನಾಡು - ಕರ್ನಾಟಕದ ಗಡಿ ಭಾಗವನ್ನು ಹಂಚಿಕೊಂಡಿರುವ ಗುಮ್ಮಳಾಪುರದಲ್ಲಿ ಕನ್ನಡವೇ ಆಧ್ಯ ಭಾಷೆಯಾಗಿ ಮಾತನಾಡುವ ಕನ್ನಡಿಗರಿದ್ದಾರೆ. ಒಂದು ಕಾಲದಲ್ಲಿ ಗುಮ್ಮಳಾಪುರವೂ ಕನ್ನಡ ನೆಲವಾಗಿತ್ತು ಎನ್ನುವುದನ್ನು ಇದರಿಂದ ಅರಿಯಬಹುದು.
ಜಾತ್ರೆಯ ಪೌರಾಣಿಕ ಹಿನ್ನಲೆ:ಕಲಿಯುಗ ಆರಂಭಕ್ಕೂ ಮುನ್ನ ಇದೇ ಗುಮ್ಮಳಾಪುರದ ಕುರಿಗಾಹಿ ಹುಡುಗನೊಬ್ಬ ತನಗೆ ಅಕ್ಕ ಇಲ್ಲವೆಂದು ನೊಂದು ಕಾಡಿಗೆ ಹೊರಟು ಇಲ್ಲದ ಅಕ್ಕನನ್ನು ಹುಡುಕ ಹೊರಡುತ್ತಾನಂತೆ. ಎಷ್ಟೂ ಹುಡುಕಿದರೂ ಸಿಗದೆ ನಿರಾಸೆಯಾಗಿ ಒಂದು ಬಂಡೆಯ ಮೇಲೆ ಹತ್ತಿ ಕೆಳಗೆ ಹಾರಿ ಆತ್ಮಹತ್ಯೆಯ ತಯಾರಿಯಲ್ಲಿರುತ್ತಾನೆ. ಅತ್ತ ಶಿವ ಪಾರ್ವತಿ ಲೋಕಸಂಚಾರ ಹೊರಡುವ ಸಮಯದಲ್ಲಿ ಅಕ್ಕ-ಅಕ್ಕ ಎಂಬ ಆರ್ತನಾದ ಕೇಳಿದರಂತೆ.