ಶಿರಸಿ(ಉತ್ತರ ಕನ್ನಡ):ಕಾಂಗ್ರೆಸ್ನವರು ಮೂಲಭೂತವಾಗಿ ಸಂವಿಧಾನವನ್ನು ಸಂಪೂರ್ಣವಾಗಿ ತಿರುಚಿದ್ದಾರೆ. ಅದರಲ್ಲಿ ಬೇಡದೇ ಇರುವುದನ್ನು ತುಂಬಿಸಿದ್ದಾರೆ ಎಂದು ಸಂಸದ ಅನಂತಕುಮಾರ್ ಹೆಗಡೆ ಆರೋಪಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಲಗೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ಈ ಬಾರಿ 400 ಕ್ಕೂ ಹೆಚ್ಚು ಸೀಟ್ನ್ನು ಮೋದಿ ಗೆಲ್ಲಬೇಕು. ಏಕೆಂದರೆ ನಮಗೆ ಲೋಕಸಭೆಯಲ್ಲಿ ಬಹುಮತವಿದೆ. ಆದರೆ ರಾಜ್ಯಸಭೆಯಲ್ಲಿ ಇಲ್ಲ. ಕಾಂಗ್ರೆಸ್ನವರು ಮೂಲಭೂತವಾಗಿ ಸಂವಿಧಾನವನ್ನು ಸಂಪೂರ್ಣವಾಗಿ ತಿರುಚಿದ್ದಾರೆ. ಅದರಲ್ಲಿ ಬೇಡದೇ ಇರುವುದನ್ನು ತುಂಬಿಸಿದ್ದು, ವಿಶೇಷವಾಗಿ ಇಡೀ ಹಿಂದೂ ಸಮಾಜವನ್ನು ಧಮನಿಸುವಂತಹ ರೀತಿಯಲ್ಲಿ ಕಾನೂನನ್ನು ತಂದಿಟ್ಟಿದ್ದಾರೆ. ಇದೆಲ್ಲವೂ ಬದಲಾಗಬೇಕಾದರೆ, ಬಿಜೆಪಿಗೆ ಈಗ ಇರುವ ಮೆಜಾರಿಟಿಯಲ್ಲಿ ಸಾಧ್ಯವಿಲ್ಲ ಎಂದು ತಿಳಿಸಿದರು.
ಲೋಕಸಭೆಯಲ್ಲಿ ಕಾಂಗ್ರೆಸ್ಗೆ ಮೆಜಾರಿಟಿ ಇಲ್ಲ, ಲೋಕಸಭೆಯಲ್ಲಿ ನರೇಂದ್ರ ಮೋದಿಯವರು ಮೆಜಾರಿಟಿ ತರುತ್ತಾರೆ ಎಂದು ನಾವು ಸುಮ್ಮನಿದ್ದರೇ ಗೆಲ್ಲಲು ಸಾಧ್ಯವಿಲ್ಲ. ನಮಗೆ ಲೋಕಸಭೆಯಲ್ಲೂ ಬಹುಮತ ಬೇಕು. ರಾಜ್ಯ ಸಭೆಯಲ್ಲೂ ಬಹುಮತ ಬೇಕು. ರಾಜ್ಯ ಸರ್ಕಾರಗಳಲ್ಲಿಯೂ ಮೆಜಾರಿಟಿ ಬರಬೇಕಾಗುತ್ತದೆ ಎಂದರು.
ಮೊನ್ನೆ ಕರ್ನಾಟಕದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ 3 ಸೀಟು ಕಾಂಗ್ರೆಸ್ ಗೆದ್ದಿದೆ. ಒಂದು ಸೀಟು ಬಿಜೆಪಿ ಗೆದ್ದಿದೆ. ಅಂದರೆ ಕಾಂಗ್ರೆಸ್ ಸಂಖ್ಯೆ ಅಧಿಕವಾದಾಗ ನಾವು ಏನೇ ತಿದ್ದುಪಡಿ ಮಾಡಿದರೂ ಕೂಡ ರಾಜ್ಯದಲ್ಲಿ ಪಾಸ್ ಆಗುವುದಿಲ್ಲ. ನಾವು ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ)ಯನ್ನು ಜಾರಿಗೆ ತಂದೆವು. ಸುಪ್ರೀಂ ಕೋರ್ಟ್ ಕೂಡ ಆರ್ಡರ್ ನೀಡಿತ್ತು. ಅದು ಲೋಕಸಭೆಯಲ್ಲಿ ಪಾಸ್ ಆಯಿತು, ಆದರೆ ರಾಜ್ಯಸಭೆಯಲ್ಲಿ ಭಾರೀ ಕಷ್ಟದಲ್ಲಿ ಪಾಸ್ ಆಯಿತು ಎಂದು ತಿಳಿಸಿದರು.