ಬೆಂಗಳೂರು: ಪತ್ನಿಗೆ ಜೀವನಾಂಶ ಪಾವತಿಸುವವರೆಗೂ ಪತಿ ದಾಖಲಿಸಿರುವ ವಿಚ್ಛೇದನ ಅರ್ಜಿ ಕುರಿತ ವಿಚಾರಣೆಗೆ ನ್ಯಾಯಾಲಯಗಳು ತಡೆಯಾಜ್ಞೆ ನೀಡಬಹುದು ಎಂದು ಹೈಕೋರ್ಟ್ ಆದೇಶಿಸಿದೆ.
ಮಧ್ಯಂತರ ಜೀವನಾಂಶದ ಹಿಂಬಾಕಿ ಪಾವತಿಸದ ಹಿನ್ನೆಲೆಯಲ್ಲಿ ವಿಚ್ಛೇದನ ಕೋರಿ ಪತಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಕೌಟುಂಬಿಕ ನ್ಯಾಯಾಲಯ ಆದೇಶ ಪ್ರಶ್ನಿಸಿ ಪತ್ನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರ ಪೀಠ, ವಿಚ್ಛೇದನ ಕೋರಿದ ಅರ್ಜಿಗಳಲ್ಲಿ ಪತ್ನಿಗೆ ಮಧ್ಯಂತರ ಜೀವನಾಂಶ ಪಾವತಿಸುವಂತೆ ಹೊರಡಿಸಿದ ನ್ಯಾಯಾಲಯದ ಆದೇಶ ಪಾಲಿಸದ ಹಲವು ಪ್ರಕರಣಗಳು ಹೈಕೋರ್ಟ್ ಮುಂದೆ ಬರುತ್ತಿವೆ. ಮಧ್ಯಂತರ ಜೀವನಾಂಶ ಪಾವತಿಸದಿದ್ದರೂ ಪತಿ ಮಾತ್ರ ವಿಚ್ಛೇದನ ಕೋರಿದ ಮುಖ್ಯ ಅರ್ಜಿ ವಿಚಾರಣೆ ಮುಂದುವರಿಸಲು ಕೋರುತ್ತಾರೆ. ಆದರೆ, ಮಧ್ಯಂತರ ಜೀವನಾಂಶ ಪಾವತಿ ಮಾಡದ ಸಂದರ್ಭದಲ್ಲಿ ನ್ಯಾಯಾಲಯಗಳು ವಿಚ್ಛೇದನಕ್ಕಾಗಿ ಪತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ತಡೆ ನೀಡಬಹುದು. ಅದು ಬಿಟ್ಟು ಮಧ್ಯಂತರ ಜೀವನಾಂಶವನ್ನು ವಸೂಲಾತಿಗೆ ಸಂಬಂಧಪಟ್ಟ ಅಮಲ್ಜಾರಿ ಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಪತ್ನಿಗೆ ಸೂಚಿಸಲಾಗದು ಎಂದು ತಿಳಿಸಿದೆ.
ಅಲ್ಲದೆ, ಮಧ್ಯಂತರ ಜೀವನಾಂಶ ಪಾವತಿಗೆ ಕೋರ್ಟ್ ಹೊರಡಿಸಿದ ಆದೇಶವನ್ನು ಪತಿ ಪಾಲಿಸಿಲ್ಲ. ಇಂತಹ ನಡೆಯನ್ನು ನ್ಯಾಯಾಲಯ ಸಹಿಸುವುದಿಲ್ಲ. ನ್ಯಾಯಾಲಯ ಆದೇಶಕ್ಕೆ ಗೌರವ ತೋರದ ಪಕ್ಷಗಾರನ ಧೋರಣೆಯನ್ನು ಗಂಭೀರವಾಗಿ ಪರಿಗಣೀಸಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಏನಿದು ಪ್ರಕರಣ?: ಪ್ರಕರಣದಲ್ಲಿ ಅರ್ಜಿದಾರೆಯ ಪತಿಯು ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ 2016ರಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯವು ಪತ್ನಿಗೆ 2016ರಿಂದ ವಿಚ್ಛೇದನ ಕೋರಿದ ಮುಖ್ಯ ಅರ್ಜಿಯ ಇತ್ಯರ್ಥದವರೆಗೆ ಮಧ್ಯಂತರ ಜೀವನಾಂಶವಾಗಿ ಪತ್ನಿಗೆ ಮಾಸಿಕ 15 ಸಾವಿರ ರೂ. ಮಧ್ಯಂತರ ಪರಿಹಾರ ನೀಡಬೇಕು. ಜೀವನಾಂಶದ ಹಿಂಬಾಕಿಯನ್ನು ಒಂದು ತಿಂಗಳಲ್ಲಿ ಪಾವತಿಸಬೇಕು ಎಂದು 2019ರಲ್ಲಿ ಪತಿಗೆ ಆದೇಶಿಸಿತ್ತು.
ಆದರೆ, ಪತಿ ಜೀವನಾಂಶದ ಹಿಂಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿ, ಪತಿ ಜೀವನಾಂಶದ ಹಿಂಬಾಕಿ ಪಾವತಿಸುವವರೆಗೆ ವಿಚ್ಛೇದನ ಕೋರಿಕೆ ಕುರಿತ ಮುಖ್ಯ ಅರ್ಜಿ ವಿಚಾರಣೆಗೆ ತಡೆ ನೀಡಬೇಕು ಎಂದು ಕೋರಿದ್ದರು. ಆ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ ಪತ್ನಿ ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ:ಒಕ್ಕಲಿಗರ ಸಂಘದಲ್ಲಿ ಅವಿಶ್ವಾಸ ನಿರ್ಣಯ: ನಿಯಮಗಳ ತಿದ್ದುಪಡಿ ಉತ್ತಮ - ಹೈಕೋರ್ಟ್ ಸಲಹೆ - High Court