ಸಚಿವ ಪರಮೇಶ್ವರ್ ಪ್ರತಿಕ್ರಿಯೆ ದಾವಣಗೆರೆ: "ದೇಶದ್ರೋಹಿ ಹೇಳಿಕೆ ನೀಡಿದವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಹೇಳಿಕೆ ಸಂಬಂಧ ಕೆ.ಎಸ್.ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದೆ, ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ವಾಲ್ಮೀಕಿ ಮಠದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದರು.
ಇದೇ ವೇಳೆ, ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ, "ಪ್ರತಾಪ್ ರೆಡ್ಡಿ ವೈಯಕ್ತಿಕ ಕಾರಣಕ್ಕೆ ವಿಆರ್ಎಸ್ ತೆಗೆದುಕೊಂಡಿದ್ದಾರೆ. ಅದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ" ಎಂದರು.
ಇನ್ನು, ಸಚಿವರೊಂದಿಗೆ ಸಭೆ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿ, "ಆಹಾರ ಸಚಿವ ಮುನಿಯಪ್ಪ ಉಪಹಾರಕ್ಕೆ ಕರೆದಿದ್ದರು, ಅದಕ್ಕೆ ಹೋಗಿದ್ದೆವು. ಎಲ್ಲರೂ ಸೇರಿದ ಮೇಲೆ ರಾಜಕೀಯ ಬಿಟ್ಟು ಬೇರೇನು ಚರ್ಚೆ ಮಾಡೋಕೆ ಸಾಧ್ಯ?. ಮುಂದಿನ ಲೋಕಸಭಾ ಚುನಾವಣೆಗೆ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು. ನಮಗೆ ಜವಾಬ್ದಾರಿ ಕೊಟ್ಟಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಚುನಾವಣೆಗೆ ಸಿದ್ಧತೆ ಬಗ್ಗೆ ಚರ್ಚೆ ಮಾಡಿದ್ದೇವೆ. ಸುರ್ಜೇವಾಲ, ಹೈಕಮಾಂಡ್ ಯಾರ ಬಗ್ಗೆಯೂ ಅಲ್ಲಿ ಚರ್ಚಿಸಿಲ್ಲ" ಎಂದು ತಿಳಿಸಿದರು.
ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್, ಪಿ.ವಿ.ನರಸಿಂಹರಾವ್ ಮತ್ತು ಎಂ.ಎಸ್.ಸ್ವಾಮಿನಾಥನ್‌ಗೆ ಭಾರತ ರತ್ನ ಘೋಷಣೆಯಾಗಿರುವದರ ಬಗ್ಗೆ ಪ್ರತಿಕ್ರಿಯಿಸುತ್ತಾ, "ಅವರೆಲ್ಲರೂ ಮಹನೀಯರು ಈ ದೇಶಕ್ಕಾಗಿ ಅವರದ್ದೇ ರೀತಿಯಲ್ಲಿ ಕೊಡುಗೆ ಕೊಟ್ಟಿದ್ದಾರೆ. ಸಂದೇಶ ಕೊಟ್ಟಿದ್ದಾರೆ. ಇತ್ತೀಚಿಗೆ ಎಲ್.ಕೆ.ಅಡ್ವಾಣಿ, ಕರ್ಪೂರಿ ಠಾಕೋರ್ ಈಗ ನರಸಿಂಹರಾವ್ ಅವರಿಗೆ ಭಾರತ ರತ್ನ ಕೊಟ್ಟಿರುವುದು ಸ್ವಾಗತಾರ್ಹ. ದೇಶದ ಅಭಿವೃದ್ಧಿಗೆ ಬದಲಾವಣೆಯನ್ನು ತಂದವರು ಪಿ.ವಿ.ನರಸಿಂಹರಾವ್ ಮತ್ತು ಡಾ.ಮನಮೋಹನ್ ಸಿಂಗ್. ಹೀಗಾಗಿ ಅವರು ಭಾರತ ರತ್ನಕ್ಕೆ ಅರ್ಹರು. ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಅನ್ನೋದು ಕೂಡಾ ನಮ್ಮ ಆಗ್ರಹ" ಎಂದರು.
ರಾಜ್ಯದಲ್ಲಿ ವಾಲ್ಮೀಕಿ ವಿಶ್ವವಿದ್ಯಾಲಯ ಆಗಲೇಬೇಕು-ಪರಮೇಶ್ವರ್: ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ದೇಶದಲ್ಲಿ ವರ್ಣಾಶ್ರಮ ಪದ್ಧತಿ ಇದೆ. ದೇಶದಲ್ಲಿ ಸಮಾನತೆ ಪ್ರತಿಪಾದನೆ ಮಾಡಿದರೂ ಜಾತಿ ವ್ಯವಸ್ಥೆ ಮಾತ್ರ ಜೀವಂತವಾಗಿದೆ. ವಾಲ್ಮೀಕಿ ಸಮಾಜ ದೇಶದಲ್ಲಿ ದೊಡ್ಡ ಸಮಾಜವಾಗಿದೆ. ಆಂಧ್ರಪ್ರದೇಶ, ಪಂಜಾಬ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಲ್ಮೀಕಿ ಸಮಾಜ ಇದೆ. ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡುವ ವಿಚಾರದಲ್ಲಿ ಆಗಿನ ಸಿಎಂ ಕುಮಾರಸ್ವಾಮಿ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸಲಿಲ್ಲ. ರಾಜ್ಯದಲ್ಲಿ ವಾಲ್ಮೀಕಿ ವಿಶ್ವವಿದ್ಯಾಲಯ ಆಗಲೇಬೇಕು. ವಾಲ್ಮೀಕಿ ಸಮಾಜಕ್ಕೆ ಅಲ್ಲ, ರಾಜ್ಯಕ್ಕೆ ವಾಲ್ಮೀಕಿ ವಿವಿ ಸ್ಥಾಪನೆಗೆ ಬಜೆಟ್ನಲ್ಲಿ ಘೋಷಣೆ ಮಾಡಬೇಕು. ಸಿಎಂ ಸಿದ್ದರಾಮಯ್ಯ ಈ ಕೆಲಸ ಮಾಡದೇ ಇದ್ದರೆ ಮತ್ಯಾರು ಕೂಡಾ ಮಾಡಲ್ಲ" ಎಂದು ಹೇಳಿದರು.
ಇದನ್ನೂ ಓದಿ:ತಾಕತ್ತಿದ್ದರೆ ಹೆಚ್.ಕೆ.ಪಾಟೀಲ್ ನನ್ನ ವಿರುದ್ಧ ಕೇಸ್ ಹಾಕಲಿ: ಕೆ.ಎಸ್.ಈಶ್ವರಪ್ಪ