ಬೆಂಗಳೂರು :ಸ್ನೇಹಿತರಿಂದಲೇ ವ್ಯಕ್ತಿಯೊಬ್ಬ ಹತ್ಯೆಗೊಳಗಾರಿರುವ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅತೀಕ್ ಮಸೀದಿ ಬಳಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಸೈಯ್ಯದ್ ಇಸಾಕ್ (31) ಎಂದು ಗುರುತಿಸಲಾಗಿದೆ. ರೌಡಿಶೀಟರ್ ವೆಂಕಟೇಶ್ ಅಲಿಯಾಸ್ ಒಂಟಿಕೈ ವೆಂಕಟೇಶ ಹಾಗೂ ಮತ್ತಿಬ್ಬರು ಆರೋಪಿಗಳಿಂದ ನಸುಕಿನ ಜಾವ 3 ಗಂಟೆ ಸುಮಾರಿಗೆ ಕೃತ್ಯ ನಡೆದಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹತ್ಯೆಯಾದ ಸೈಯ್ಯದ್ ಇಸಾಕ್‌ಗೆ ಮದುವೆಯಾಗಿ ಒಂದು ಮಗು ಇದ್ದರೂ ತನ್ನ ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಒಂದೇ ಏರಿಯಾದವರಾಗಿದ್ದರಿಂದ ಈ ವಿಚಾರವನ್ನ ಸಂತ್ರಸ್ತ ಸ್ನೇಹಿತ ವೆಂಕಟೇಶ್ ಬಳಿ ಹೇಳಿಕೊಂಡಿದ್ದನು. ಆಗ ಇಸಾಕ್‌ನನ್ನ ಕರೆಸಿ ವೆಂಕಟೇಶ್ ಬುದ್ದಿ ಮಾತು ಹೇಳಿದ್ದ.
ವೆಂಕಟೇಶ್ ಮಾತು ಕೇಳದ ಇಸಾಕ್, ಆತನ ವಿರುದ್ಧವೇ ತಿರುಗಿ ಬಿದ್ದಿದ್ದ. ಅಲ್ಲದೇ ವೆಂಕಟೇಶನನ್ನ ಮುಗಿಸಿಬಿಡುವುದಾಗಿ ಸ್ನೇಹಿತರ ಬಳಿ ಹೇಳಿಕೊಂಡು ಓಡಾಡುತ್ತಿದ್ದ ಎನ್ನಲಾಗಿದೆ. ತಡರಾತ್ರಿ ಇಸಾಕ್‌ಗೆ ಕರೆ ಮಾಡಿದ್ದ ವೆಂಕಟೇಶ್, ಆತನನ್ನ ಸಿದ್ದಾಪುರದ ಅತೀಕ್ ಮಸೀದಿ ಬಳಿ ಕರೆಸಿಕೊಂಡಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಾಗ ವೆಂಕಟೇಶ್ ಮತ್ತು ಆತನೊಂದಿಗಿದ್ದ ಇಬ್ಬರು ಇಸಾಕ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಪರಿಣಾಮ ಇಸಾಕ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಓದಿ:ಯಾದಗಿರಿ: ಪಿಎಸ್ಐ ಪರಶುರಾಮ್ ಹೃದಯಾಘಾತದಿಂದ ಸಾವು - PSI died of heart attack