ಬೆಳಗಾವಿ: ಜ.22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಮತ್ತೊಂದೆಡೆ, ಕುಂದಾನಗರಿ ಬೆಳಗಾವಿಯಲ್ಲಿ ಕಲಾವಿದ ಕೈಯಲ್ಲಿ ಅರಳಿರುವ ರಾಮಮಂದಿರ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ಬೆಳಗಾವಿ ಶ್ರೀನಗರದ ವಂಟಮೂರಿ ಕಾಲೋನಿ ಕಲಾವಿದ ಮಲ್ಲಿಕಾರ್ಜುನ ಎಸ್. ಧೂಳಿ ಎಂಬುವರು ರಾಮಮಂದಿರ ಪ್ರತಿಕೃತಿ ನಿರ್ಮಾಣ ಮಾಡಿದ್ದಾರೆ. ಕೇವಲ 10 ರಿಂದ 12 ದಿನಗಳಲ್ಲಿ ಥರ್ಮಾಕೋಲ್ ಬಳಸಿ ಮಂದಿರದ ಪ್ರತಿಕೃತಿ ಮಾಡಿದ್ದಾರೆ.
ಶ್ರೀರಾಮನ ಮಂದಿರ 12.5 ಅಡಿ ಉದ್ದ, 8 ಅಡಿ ಅಗಲ ಹಾಗೂ 7.5 ಅಡಿ ಎತ್ತರವಿದ್ದು, ಅಯೋಧ್ಯೆಯಲ್ಲಿನ ಶ್ರೀರಾಮನ ಮಂದಿರ ಹೋಲುವಂತೆ ತಯಾರಿಸಲಾಗಿದೆ. ರಾಮಮಂದಿರಲ್ಲಿ ಪ್ರವೇಶ ದ್ವಾರ, ಗರ್ಭಗುಡಿ, 350 ಕಂಬಗಳು, 21 ಗೋಪುರಗಳು, ಮೂರು ಮಹಡಿಗಳನ್ನು ಹೊಂದಿದೆ. ಇದಕ್ಕಾಗಿ 1 ಕ್ಯೂಬಿಕ್ ಥರ್ಮಾಕೋಲ್ ಬಳಕೆ ಮಾಡಲಾಗಿದ್ದು, ಸುಮಾರು 20 ಸಾವಿರ ರೂ. ಖರ್ಚಾಗಿದೆ. ಈ ರಾಮಮಂದಿರದ ನಿರ್ಮಾಣಕ್ಕೆ ಇಂಟರ್ನೆಟ್ ನಲ್ಲಿ ಮಾಹಿತಿ ಸಂಗ್ರಹ ಮಾಡಲಾಗಿದೆ. ಅಂತರ್ಜಾಲದಲ್ಲಿ ಫೋಟೋ, ವಿಡಿಯೋವನ್ನು ವೀಕ್ಷಿಸಿ ವಿವರವಾಗಿ ಅಧ್ಯಯನ ಮಾಡಿ ನಿರ್ಮಿಸಲಾಗಿದೆ.
ಈಟಿವಿ ಭಾರತ್ ಜೊತೆಗೆ ಮಾತನಾಡಿದ ಕಲಾವಿದ ಮಲ್ಲಿಕಾರ್ಜುನ ಧೂಳಿ, ಶಾಹಪುರ ಕೋರೆ ಗಲ್ಲಿಯ ಹನುಮಾನ ತಾಲೀಮ ಯುವಕ ಮಂಡಳಿಯವರು ಆರ್ಡರ್ ಕೊಟ್ಟಿದ್ದರು. 22ರಂದು ಲಕ್ಷ ದಿಪೋತ್ಸವ ಕಾರ್ಯಕ್ರಮ ಆಯೋಜಿಸಿದ್ದು, ಅಲ್ಲಿ ಇದನ್ನು ಪ್ರದರ್ಶನಕ್ಕಿಡಲಿದ್ದಾರೆ. ನನ್ನ ಮಕ್ಕಳಾದ ಪ್ರಜ್ವಲ್ ಮತ್ತು ಕುಬೇರ ನನಗೆ ಸಹಾಯ ಮಾಡಿದ್ದಾರೆ. ಇದೊಂದು ಪುಣ್ಯದ ಕೆಲಸ ಎಂದು ಭಾವಿಸಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.