ಕರ್ನಾಟಕ

karnataka

ETV Bharat / state

ಪೊಲೀಸರ ಹೆಸರಲ್ಲಿ ನಿಮಗೂ ವಾಟ್ಸಪ್ ಕಾಲ್ ಬಂದಿದೆಯಾ? ವಂಚಕರಿಂದ ಬೆಳಗಾವಿ ವ್ಯಕ್ತಿ ಪಾರಾಗಿದ್ದು ಹೀಗೆ - fraud call - FRAUD CALL

ಈಗ ಸೈಬರ್​ ಕ್ರೈಮ್​ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲೂ ವಂಚಕರು ಪೊಲೀಸರ ಹೆಸರಿನಲ್ಲಿ ವಾಟ್ಸಪ್ ಕರೆ ಮಾಡಿ, ದುಡ್ಡು ಹೊಡೆಯಲು ನಾನಾ ಕಸರತ್ತುಗಳನ್ನು ನಡೆಸುತ್ತಾರೆ. ಹೀಗೆ ಕುಂದಾನಗರಿ ವ್ಯಕ್ತಿಗೆ ಅಪರಿಚಿತರು ಕರೆ ಮಾಡಿದ್ದರು. ಆದ್ರೆ ಅದೃಷ್ಟವಶಾತ್​ ವಂಚಕರ ಜಾಲದಿಂದ ಇಮಾಮ್ ಹಸನ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

Imam Hasan Halakarni
ಇಮಾಮ್ ಹಸನ್ ಹಲಕರ್ಣಿ (ETV Bharat)

By ETV Bharat Karnataka Team

Published : Jun 23, 2024, 5:04 PM IST

ಇಮಾಮ್ ಹಸನ್ ಹಲಕರ್ಣಿ ಮಾತನಾಡಿದರು (ETV Bharat)

ಬೆಳಗಾವಿ : ನಿಮ್ಮ ಮನೆಯವರು ಸಂಕಷ್ಟದಲ್ಲಿದ್ದಾರೆ. ದುಡ್ಡು ಕೊಟ್ಟರೆ ಬಿಡುತ್ತೇವೆ, ಇಲ್ಲದಿದ್ದರೆ ಹುಷಾರ್ ಎಂದು ಯಾರಾದ್ರೂ ನಿಮಗೆ ಫೋನ್ ಕರೆ ಮಾಡಿದ್ರೆ ನಂಬಬೇಡಿ. ನಂಬಿ ಏನಾದರೂ ದುಡ್ಡು ಟ್ರಾನ್ಸಫರ್ ಮಾಡಿದ್ರೆ ಮುಗಿತು, ನಿಮ್ಮ ಹಣ ಗೋವಿಂದಾ-ಗೋವಿಂದ.

ಆನ್​ಲೈನ್ ವಂಚನೆ ಕೇಸ್​ಗಳು ದಿನದಿಂದ ಹೆಚ್ಚಾಗುತ್ತಿವೆ. ಯಾರೋ ಅನಾಮಿಕರು ಫೋನ್ ಕರೆ ಮಾಡಿ ಬ್ಲಾಕ್ ಮೇಲ್ ಕೂಡ ಮಾಡುವುದು ಸಾಮಾನ್ಯವಾಗಿದೆ. ಇಂಥದ್ದೆ ಒಂದು ಪ್ರಕರಣ ಬೆಳಗಾವಿಯಲ್ಲಿ ನಡೆದಿದ್ದು, ಅದು ಪೊಲೀಸರ ಹೆಸರಿನಲ್ಲೆ ಫ್ರಾಂಕ್ ಕಾಲ್ ಮಾಡಿ ಹಣ ವಂಚನೆಗೆ ಯತ್ನಿಸಿ ವಿಫಲವಾಗಿದೆ.

ಹೌದು, ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೆಳಗಾವಿ ಅನ್ನಪೂರ್ಣವಾಡಿಯ ಇಮಾಮ್ ಹಸನ್ ಅಪ್ಪಾಲಾಲ್ ಹಲಕರ್ಣಿ ಎಂಬುವವರ ಮೊಬೈಲಿಗೆ ಒಂದು ವಾಟ್ಸಪ್ ಕರೆ ಬಂದಿದೆ. ಆ ಕರೆಯನ್ನು ಇಮಾಮ್ ಹಸನ್ ಅವರ ಪತ್ನಿ ಸ್ವೀಕರಿಸಿದ್ದಾರೆ. ನಿಮ್ಮ ಮಗನ ಹೆಸರೇನು? ಎಂದು ಕೇಳಿದ್ದಾರೆ. ಆಗ ಅಕ್ಬರ್ ಅಂತಾ ಅವರು ಹೇಳಿದ್ದಾರೆ. ಆಗ ಯಾರದೋ ಫೋನ್ ಬಂದಿದೆ ಎಂದು ಅವರ ಪತಿ ಕೈಗೆ ಫೋನ್ ಕೊಟ್ಟಿದ್ದಾರೆ.

ಇಮಾಮ್ ಹಸನ್ ಮೊಬೈಲ್ ತೆಗೆದುಕೊಳ್ಳುತ್ತಿದ್ದಂತೆ ನಾವು ಪೊಲೀಸರು ಮಾತಾಡ್ತಿರೋದು? ನಿಮ್ಮ ಮಗ ಅಕ್ಬರ್ ಓರ್ವ ಮಹಿಳೆಯನ್ನು ರೇಪ್ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ತಕ್ಷಣವೇ 1 ಲಕ್ಷ ರೂ. ಕೊಡಬೇಕು. ಇಲ್ಲದಿದ್ದರೆ, ನಿಮ್ಮ ಮಗನ ಮಾನ, ಮರ್ಯಾದೆ ಮೂರು ಕಾಸಿಗೆ ಹರಾಜು ಆಗುತ್ತದೆ. ಅಲ್ಲದೇ ಜೈಲು ಶಿಕ್ಷೆಯೂ ಆಗುತ್ತದೆ ಎಂದು ಹೆದರಿಸಿದ್ದಾರೆ. ಈ ಮಾತು ಕೇಳಿ 67 ವರ್ಷದ ಇಮಾಮ್ ಹಸನ್ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ ಅವರ ಬಿಪಿ ಹೈ ಆಗಿದೆ. ಇರೋ ಒಬ್ಬನೆ ಗಂಡು ಮಗನ ಮೇಲೆ ಇದೆಂಥ ಆಪಾದನೆ. ಅಯ್ಯೋ ಏನಾಗಿ ಬಿಡುತ್ತದೆಯೋ? ಎಂದು ಚಿಂತಾಕ್ರಾಂತರಾಗಿದ್ದಾರೆ.

ಮಗ ಮನೆಗೆ ಬಂದಾಗ ಸುಳ್ಳು ಬಯಲು; ನನ್ನ ಬಳಿ 1 ಲಕ್ಷ ಹಣ ಇಲ್ಲ. ಫೋನ್ ಪೇನಲ್ಲಿ 10 ಸಾವಿರ ರೂ. ಮಾತ್ರವಿದೆ ಎಂದಿದ್ದಾರೆ. ಆಗ ಅವರು ಅಕೌಂಟ್​ನಲ್ಲಿರುವ ಎಲ್ಲಾ ಹಣ ತಾವು ಹೇಳುವ ನಂಬರ್​ಗೆ ಕಳಿಸುವಂತೆ ಹೇಳಿದ್ದಾರೆ. ಆದರೆ, ಅದೃಷ್ಟವಶಾತ್ ಅವರು ಕಳಿಸಿದ ಮೂರು ನಂಬರಿಗೂ ಹಣ ಹೋಗಿಲ್ಲ. ಅಷ್ಟೊತ್ತಿಗಾಗಲೇ ಇಮಾಮ್ ಹಸನ್ ಪತ್ನಿ ತಮ್ಮ ಮಗನಿಗೆ ಕಾಲ್ ಮಾಡಿದಾಗ, ಇಲ್ಲಿಯೇ ಮನೆ ಸಮೀಪ ಇದ್ದೇನೆ ಎಂದಿದ್ದಾರೆ. ಮಗ ಮನೆಗೆ ಬರುತ್ತಿದ್ದಂತೆ ಅದು ಸುಳ್ಳು ಕರೆ ಎಂಬುದು ಆ ದಂಪತಿಗೆ ಸ್ಪಷ್ಟವಾಗಿದೆ.

ಈ ಕುರಿತು ಬೆಳಗಾವಿ ಸಿಇಎನ್ ಅಪರಾಧ ಠಾಣೆಗೆ ಆಗಮಿಸಿದ ಇಮಾಮ್ ಹಸನ್ ಹಲಕರ್ಣಿ ದೂರು ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ನನಗೆ ಕಾಲ್ ಮಾಡಿದ ವಾಟ್ಸಪ್ ನಂಬರ್ ಡಿಪಿ ತ್ರಿಸ್ಟಾರ್ ಇರುವ ಖಾಕಿ ಡ್ರೆಸ್ ಹಾಕಿದ್ದ ಪೊಲೀಸ್ ಅಧಿಕಾರಿಯ ಫೋಟೋ ಇತ್ತು. ಹಾಗಾಗಿ, ನಾನು ಹೆದರಿದೆ.

ಇರೋ ಒಬ್ಬ ಮಗನಿಗಾಗಿ ನನ್ನ ಬಳಿ ಇದ್ದ 10 ಸಾವಿರ ರೂಪಾಯಿ ಕೊಡಲು ನಾನು ಸಿದ್ಧನಾದೆ. ಆದರೆ, ಅವರು ಕೊಟ್ಟ ಮೂರು ನಂಬರ್​ಗಳಿಗೂ ಫೋನ್ ಪೇ ದುಡ್ಡು ಹೋಗಲಿಲ್ಲ. ನಾನು ಅವರ ಜೊತೆ ಮಾತನಾಡುವಾಗಲೇ ಮನೆಗೆ ಬಂದ. ಅದು ಫ್ರಾಡ್ ಕಾಲ್ ಎಂದು ಗೊತ್ತಾಯಿತು. ಹಾಗಾಗಿ, ಇಂತಹ ಕಾಲ್ ಬಂದಾಗ ಯಾರೂ ಭಯಪಡಬೇಡಿ ಮತ್ತು ದುಡ್ಡು ಹಾಕಬೇಡಿ. ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿ'' ಎಂದು ಕೇಳಿದ್ದಾರೆ.

ಈಟಿವಿ ಭಾರತ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರನ್ನು ಸಂಪರ್ಕಿಸಿದಾಗ, ಪೊಲೀಸರ ಹೆಸರಿನಲ್ಲಿ ಹೆದರಿಸಿ ಹಣ ವಸೂಲಿ ಮಾಡುವ ಹೊಸ ವಿಧಾನವನ್ನು ಆರೋಪಿಗಳು ಕಂಡುಕೊಂಡಿದ್ದಾರೆ. ಹಾಗಾಗಿ, ಇಂಥ ಕರೆಗಳನ್ನು ಯಾರೂ ನಂಬಬೇಡಿ. ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿ ಮತ್ತು ದೂರು ಕೊಡುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ :ಕೌನ್ ಬನೇಗಾ ಕರೋಡ್​ಪತಿ ಹೆಸರಲ್ಲಿ ವಂಚನೆ: ಇವರು ಕಳೆದುಕೊಂಡ ಹಣವೆಷ್ಟು?

ABOUT THE AUTHOR

...view details